ಕಳೆದ ಕೆಲವು ದಿನಗಳಿಂದ ಸುರಿದ ಅಲ್ಪಸ್ವಲ್ಲ ಮಳೆಗೆ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮತ್ತೆ ಕುಸಿತ ಆರಂಭಗೊಂಡಿದ್ದು, ಸೋಮವಾರ ಹೆದ್ದಾರಿ ಸುತ್ತಮುತ್ತ ಜರಿದು ಬಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ. 
ನ್ಯೂಸ್

ಕೆತ್ತಿಕಲ್‌ನಲ್ಲಿ ಮತ್ತೆ ಗುಡ್ಡ ಕುಸಿತ

Shravan Kumar Nala
ಮಂಗಳೂರು: ಕಳೆದ ಕೆಲವು ದಿನಗಳಿಂದ ಸುರಿದ ಅಲ್ಪಸ್ವಲ್ಲ ಮಳೆಗೆ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮತ್ತೆ ಕುಸಿತ ಆರಂಭಗೊಂಡಿದ್ದು, ವಿಸ್ತರಣೆಗೊಳ್ಳುತ್ತಿರುವ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಭೀತಿ ಹುಟ್ಟಿಸುವಂತಿದೆ. ಈ ಮಧ್ಯೆ ಸೋಮವಾರ ಹೆದ್ದಾರಿ ಸುತ್ತಮುತ್ತ ಜರಿದು ಬಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ.
ಕೆತ್ತಿಕಲ್‌ನಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿದು ಭಾರಿ ಅನಾಹುತ ಸಂಭವಿಸಿತ್ತು. ಅಂದಿನ ದುರಂತಕ್ಕೆ ಗುಡ್ಡದ ಮಣ್ಣು ಮಾರಾಟ ಕಾರಣವಾಗಿದ್ದರೆ, ಪ್ರಸಕ್ತ ಭೀತಿ ವಾತಾವರಣಕ್ಕೆ ‘ಗುಡ್ಡ ಬಗೆಯ’ಲಾದ ಅವೈಜ್ಞಾನಿಕ ಕಾಮಗಾರಿ ಕಾರಣವಾಗಿದೆ. ಸತತ ಸುರಿಯುತ್ತಿರುವ ಮಳೆಗೆ ಹೆದ್ದಾರಿ ಬದಿಯಲ್ಲಿ ಗುಡ್ಡ ಕುಸಿಯದಂತೆ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾದ ಕಾಮಗಾರಿ ಕ್ಷಣಾರ್ಧದಲ್ಲಿ ಕುಸಿದು ಹೆದ್ದಾರಿಗೆ ಬೀಳುವ ಭೀತಿ ಹೆಚ್ಚಾಗಿದೆ. ತಳಭಾಗದಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ಮಣ್ಣು ಕುಸಿಯಲಾರಂಭಿಸಿದೆ. ಇದೇ ಗುಡ್ಡ ಮೇಲಿಂದ ಕುಸಿದರೆ ಲೋಡುಗಟ್ಟಲೆ ಮಣ್ಣು ನೇರವಾಗಿ ಹೆದ್ದಾರಿಗೆ ಬೀಳಲಿದೆ. ಅಂತಹ ಅಪಾಯವೇನಾದರೂ ಸಂಭವಿಸಿದಲ್ಲಿ ಹೆದ್ದಾರಿ ಸಂಚಾರ ಬಂದ್ ಆಗಲಿದ್ದು ಸದ್ಯ ರಾಷ್ಟ್ರೀಯ ಹೆದ್ದಾರಿ 169ರ ಈ ಭಾಗದ ವಾಹನ ಸಂಚಾರ ಅಪಾಯದಲ್ಲಿದೆ. ರಾತ್ರಿ ವೇಳೆ ವಾಹನ ಸವಾರರು ಅತಿ ಎಚ್ಚರ ವಹಿಸಬೇಕು.
ಕೆತ್ತಿಕಲ್‌ನಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ದ್ವಿಪಥ ಕಾಮಗಾರಿ ಪೂರ್ಣಗೊಂಡಿದೆ. ಸದ್ಯ ತಿರುವೈಲು ಸರ್ಕಾರಿ ಶಾಲೆಯಿಂದ ಸ್ವಲ್ಪ ಮುಂದಕ್ಕೆ ಗುಡ್ಡ ಕುಸಿಯುವ ಹಂತದಲ್ಲಿದ್ದರೂ ತಡೆಗೋಡೆ ಇದೆ. ಇಲ್ಲಿ ಗುಡ್ಡ ಕುಸಿತ ತಡೆಯಲು ಹಾಸಲಾದ ಅತ್ಯಾಧುನಿಕ ತಂತ್ರಜ್ಞಾನದ ಕಬ್ಬಿಣದ ಜಾಲಿ ತುಸು ಬಿಚ್ಚಿಕೊಂಡಿದೆ. ಇನ್ನು ಗುಡ್ಡದ ಮಣ್ಣು ಹೆದ್ದಾರಿಗೆ ಬೀಳುವುದೊಂದೇ ಬಾಕಿ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಡಿಬಿಎಲ್ ಸಿಬ್ಬಂದಿಯು ಜೆಸಿಬಿ ಬಳಸಿಕೊಂಡು ತೋಡು ಮಾಡಿ ಕೆಳಗಡೆ ನೀರು ಹರಿಯುವಂತೆ ಮಾಡುತ್ತಿದ್ದಾರೆ. ಜತೆಗೆ ಸಂಚಾರ ಸುಗಮಕ್ಕೆ ಬ್ಯಾರಿಕೇಡ್ ಬಳಸಲಾಗಿದ್ದು, ಸಿಬ್ಬಂದಿ ನಿಯುಕ್ತಿಗೊಳಿಸಿದ್ದಾರೆ.