ನ್ಯೂಸ್

ವಂಚಕಿ ಐಶ್ವರ್ಯಗೌಡ ವಿರುದ್ಧ ಮತ್ತೊಂದು ಎಫ್‌ಐಆರ್

ಬೆಂಗಳೂರು: ಮಾಜಿ ಸಂಸದರೊಬ್ಬರ ಸಹೋದರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಐಶ್ವರ್ಯಗೌಡ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

ವೈದ್ಯರಾದ ಮಂಜುಳಾ ಪಾಟೀಲ್ ಎಂಬುವರ ಬಳಿ ೨.೫೨ಕೋಟಿ ರೂ. ನಗದು ಮತ್ತು ೨.೫೦ ಕೋಟಿ ರೂ. ಮೌಲ್ಯದ ೨ ಕೆ.ಜಿ. ೩೫೦ ಗ್ರಾಂ ಚಿನ್ನಾಭರಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.

ಆರ್.ಆರ್.ನಗರ ಬಿಇಎಂಲ್ ಲೇಔಟ್ ನಿವಾಸಿಪ್ರಸೂತಿ ಮತ್ತು ಸೀರೋಗ ತಜ್ಞೆ ಡಾ.ಮಂಜುಳಾ ಎ. ಪಾಟೀಲ್ ಎಂಬುವರು ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದು, ಐಶ್ವರ್ಯಾ ಗೌಡ, ಅವರ ಪತಿ ಹರೀಶ್, ಕಾರು ಚಾಲಕರಾದ ಧನಂಜಯ್ ಹಾಗೂ ಅಶ್ವಥ್ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ದೂರುದಾರರಿಗೆ ಆರೋಪಿಗಳಿಗೆ ಹಣ ಸಂದಾಯ ಮಾಡಿದ ಕುರಿತು ದಾಖಲೆ ಒದಗಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯರಾದ ಮಂಜುಳಾ ಪಾಟೀಲ್‌ಗೆ ೨೦೨೦-೨೧ನೇ ಸಾಲಿನಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾಗ ಐಶ್ವರ್ಯಾಗೌಡ ಪರಿಚಯವಾಗಿದೆ. ಈ ವೇಳೆ ಆಕೆ ತಾನು, ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಸಹೋದರಿ ಎಂದು ಪರಿಚಯಿಸಿಕೊಂಡಿದ್ದಳು. ಅಲ್ಲದೆ, ತನಗೆ ದೊಡ್ಡಮಟ್ಟದಲ್ಲಿ ರಿಯಲ್ ಎಸ್ಟೇಟ್, ಗೋಲ್ಡ್ ಬಿಜಿನೆಸ್, ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದಾಗಿ ನಂಬಿಸಿದ್ದಾಳೆ.

ಈ ಮಧ್ಯೆ ಮಾರ್ಚ್ ೨೦೨೨ರಲ್ಲಿ ಕೆಲವು ಕಡೆ ನನ್ನ ಕೋಟ್ಯಂತರ ರೂ. ಸ್ಟ್ರಕ್ ಆಗಿದೆ. ತುರ್ತಾಗಿ ಹಣ ಬೇಕಿದೆ ಎಂದು ೨.೫೨ ಕೋಟಿ ರೂ. ಪಡೆದುಕೊಂಡಿದ್ದಾಳೆ. ಅಲ್ಲದೆ, ೨.೫೦ ಕೋಟಿ ಮೌಲ್ಯದ ಒಟ್ಟು ೨ ಕೆ.ಜಿ ೩೫೦ ಗ್ರಾಂ ಚಿನ್ನಾಭರಣ ಪಡೆದಿದ್ದಳು. ಆದರೆ, ಹಣ ಮತ್ತು ಚಿನ್ನಾಭರಣ ಹಿಂದಿರುಗಿಸದೇ ಐಶ್ವರ್ಯಾಗೌಡ ಸಬೂಬು ಹೇಳುತ್ತಿದ್ದಳು. ಒಮ್ಮೆ ಆಕೆ ಮನೆ ಬಳಿ ಹಣ ಮತ್ತು ಚಿನ್ನಾಭರಣ ವಾಪಸ್ ಕೊಡುವಂತೆ ಕೇಳಲು ಹೋದಾಗ ಕಾರು ಚಾಲಕರಾದ ಅಶ್ವತ್ಥ ಮತ್ತು ಧನಂಜಯ್ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ನಡುವೆ ಇತ್ತೀಚಿಗೆ ಐಶ್ವರ್ಯಾ ಗೌಡ ಮತ್ತಿತರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಹಾಗೂ ಆರೋಪಿಗಳು ಜಾಮೀನು ಪಡೆದಿರುವುದು ಮಾಧ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.