ಬೆಂಗಳೂರು: ಶ್ವಾನದ ಮಾಲೀಕ ತನ್ನ ಮೇಲೆ ನಾಯಿಯನ್ನು ಛೂ ಬಿಟ್ಟಿದ್ದಾನೆಂದು ತಪ್ಪಾಗಿ ಭಾವಿಸಿದ ವ್ಯಕ್ತಿಯೊಬ್ಬ ದಾರಿಯಲ್ಲಿ ಹೋಗುತ್ತಿದ್ದ ವೃದ್ಧನನ್ನು ನಿಂದಿಸಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಲಿಯೂರು ದುರ್ಗ ಮೂಲದ ರಾಜು(೫೭) ಬಂಧಿತ ಆರೋಪಿ. ಮಲ್ಲೇಶ್ವರ ನಿವಾಸಿ ಎಚ್.ವಿ.ಬಾಲಸುಬ್ರಮಣ್ಯ (೬೨) ಗಾಯಗೊಂಡವರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?
ಆ.೨೧ರಂದು ರಾತ್ರಿ ೮ ಗಂಟೆ ಸುಮಾರಿಗೆ ಮಲ್ಲೇಶ್ವರದ ೧೭ನೇ ಕ್ರಾಸ್, ೮ ನೇ ಮೇನ್‌ನಲ್ಲಿ ಪಾದಚಾರಿ ಮಾರ್ಗದಲ್ಲಿ ಆರೋಪಿ ರಾಜು ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯೊಂದು ಏಕಾಏಕಿ ಬೊಗಳಿ ಹಿಂಬಾಲಿಸಿದೆ. ಇದರಿಂದ ರಾಜು ಗಾಬರಿಗೊಂಡಿದ್ದಾನೆ. ತಿರುಗಿ ನೋಡಿದರೆ ಆ ನಾಯಿ ಬಾಲಸುಬ್ರಹ್ಮಣ್ಯ ಅವರ ಹಿಂದೆ ನಡೆದುಕೊಂಡು ಬರುತ್ತಿತ್ತು. ಹಾಗಾಗಿ ಅದು ಅವರದ್ದೇ ನಾಯಿ ಎಂದು ರಾಜು ಭಾವಿಸಿದ್ದಾನೆ. ಆದರೆ, ಆ ನಾಯಿ ಆತನತ್ತ ನೋಡಿ ಮತ್ತೆ ಬೊಗಳಲು ಪ್ರಾರಂಭಿಸಿದೆ. ಇದರಿಂದ ಗಾಬರಿಗೊಂಡ ರಾಜು ಅಲ್ಲಿಂದ ಓಡಲು ಪ್ರಾರಂಭಿಸಿದ. ನಾಯಿ ಸಹ ಆತನನ್ನು ಬೆನ್ನಟ್ಟಿಕೊಂಡು ಬಂದಿದೆ. ಈ ವೇಳೆ ಬಾಲಸುಬ್ರಹ್ಮಣ್ಯ ಅವರ ಬಳಿ ಬಂದ ಆರೋಪಿ ರಾಜು ಜಗಳ ತೆಗೆದು ತನ್ನ ಬಳಿ ಇದ್ದ ಚಾಕುವನ್ನು ತೆಗೆದು ‘ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಹೇಳಿ ಕುತ್ತಿಗೆಗೆ ಚುಚ್ಚಲು ಯತ್ನಿಸಿದ್ದಾನೆ. ಆಗ ಬಾಲಸುಬ್ರಹ್ಮಣ್ಯ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾಕು ಬಲಭಾಗದ ಗದ್ದಕ್ಕೆ ಚುಚ್ಚಿ ಗಾಯವಾಗಿತ್ತು. ಆರೋಪಿ ಮತ್ತೆ ಚುಚ್ಚಲು ಯತ್ನಿಸಿದ್ದು ಅದು ಕಿರು ಬೆರಳಿಗೆ ಚುಚ್ಚಿದ್ದರಿಂದ ಗಾಗೊಂಡರು. ಈ ವೇಳೆ ಬಾಲಸುಬ್ರಮಣ್ಯ ಅವರು ಸಹಾಯಕ್ಕಾಗಿ ಕಿರುಚಿದ್ದಾರೆ. ಈ ವೇಳೆ ಸಾರ್ವಜನಿಕರು ಜಮಾಯಿಸಿದ್ದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಸಾರ್ವಜನಿಕರು ಬಾಲಸುಬ್ರಮಣ್ಯ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆ ದಾಖಲಿಸಿದ್ದರು. ನಂತರ ಬಾಲಸುಬ್ರಮಣ್ಯ ಅವರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಸಿಸಿ ಕ್ಯಾಮರಾದಿಂದ ಆರೋಪಿ ಪತ್ತೆ:
ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ವೀಕ್ಷಿಸಿ ರಾಜುವಿನ ಚಹರೆಯನ್ನು ಪತ್ತೆ ಮಾಡಿದರು. ಬಳಿಕ ಆತನ ಬಂಧನಕ್ಕೆ ತಂಡ ರಚಿಸಿ, ಪತ್ತೆ ಮಾಡಿ ಬಂಧಿಸಿದ್ದಾರೆ.
ತಪ್ಪಾಗಿ ಭಾವಿಸಿದೆ:
ನಾಯಿ ತನ್ನನ್ನು ಬೆನ್ನಟ್ಟಿ ಬರುತ್ತಿದ್ದಂತೆ ನಾನು ಸಹ ವೇಗವಾಗಿ ಓಡಿ ತಪ್ಪಿಸಿಕೊಂಡೆ. ಹೀಗಾಗಿ ಎದುರಿನ ಪಾದಚಾರಿ ಮಾರ್ಗಕ್ಕೆ ಓಡಿದೆ. ಆ ವೇಳೆ ನಾಯಿ ಸಹ ಕಣ್ಮರೆಯಾಯಿತು. ಆದರೆ, ಇದು ಬಾಲಸುಬ್ರಹ್ಮಣ್ಯ ಅವರ ನಾಯಿಯಾಗಿದ್ದು, ನನ್ನ ಮೇಲೆ ಛೂ ಬಿಟ್ಟಿದ್ದಾರೆ ಎಂದು ತಪ್ಪಾಗಿ ಭಾವಿಸಿ ನಾನು ಕೋಪಗೊಂಡೆ. ಹಾಗಾಗಿ ಚಾಕುವಿನಿಂದ ಬಾಲಸುಬ್ರಮಣ್ಯ ಅವರ ಮೇಲೆ ಹಲ್ಲೆ ಮಾಡಿದೆ ಎಂದು ರಾಜು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಬಾಲಸುಬ್ರಹ್ಮಣ್ಯ ಹೇಳಿದ್ದೇನು?
ಇರಿತಕ್ಕೊಳಗಾಗಿದ್ದ ಬಾಲಸುಬ್ರಹ್ಮಣ್ಯ ಅವರು ಆಸ್ಪತ್ರೆಯಲ್ಲಿದ್ದಾಗ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ರಾಜು ನನ್ನ ಬಳಿ ಬಂದು ನಾಯಿಯ ವಿಷಯವಾಗಿ ಕೂಗಲು ಪ್ರಾರಂಭ ಮಾಡಿದನು. ಆದರೆ, ಆತನ ಮಾತುಗಳು ನನಗೆ ಸರಿಯಾಗಿ ಅರ್ಥವಾಗಲೇ ಇಲ್ಲ. ಕೊನೆಗೆ ಆತ ಇದ್ದಕ್ಕಿದ್ದಂತೆ ಚಾಕುವನ್ನು ಹೊರಗೆ ತೆಗೆದು ನನಗೆ ಇರಿದನು. ಮೊದಲು ನನ್ನ ದವಡೆಗೆ ಇರಿದನು. ನಾನು ಸಹಾಯಕ್ಕಾಗಿ ಕಿರುಚಿದೆ. ಆದರೆ, ಆತ ನನ್ನ ಮೇಲೆ ಮತ್ತಷ್ಟು ದಾಳಿ ಮಾಡಿದ. ಈ ವೇಳೆ ನನ್ನ ಬಲಗೈ ಮತ್ತು ಬೆರಳಿಗೆ ಇರಿದಿದ್ದಾನೆ ಎಂದು ತಿಳಿಸಿದ್ದಾರೆ. ನನ್ನ ಕೂಗು ಕೇಳಿ ಜನರು ಜಮಾಯಿಸಿದಾಗ ರಾಜು ಅಲ್ಲಿಂದ ಓಡಿಹೋದನು. ಕೆಲವರು ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದರು. ಆ ನಾಯಿ ತಮ್ಮದಲ್ಲ, ಬೀದಿ ನಾಯಿ ಇರಬಹುದು. ರಾಜು ತಪ್ಪಾಗಿ ತಿಳಿದುಕೊಂಡು ದಾಳಿ ಮಾಡಿದ್ದಾರೆ ಎಂದು ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.