ನ್ಯೂಸ್

Amit Shah | ಪ್ರತಿ ಕುಟುಂಬ ವಾರ್ಷಿಕ 5,000 ರೂಪಾಯಿ ಖಾದಿ ಉತ್ಪನ್ನ ಖರೀದಿಸಿ, ಉದ್ಯೋಗ ಸೃಷ್ಟಿಗೆ ನೆರವಾಗಿ: ಗೃಹ ಸಚಿವ ಅಮಿತ್ ಷಾ

Amit Shah: ಪ್ರತಿ ಭಾರತೀಯ ಕುಟುಂಬವು ವಾರ್ಷಿಕವಾಗಿ ಕನಿಷ್ಠ 5,000 ರೂಪಾಯಿ ಮೌಲ್ಯದ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ, ದೇಶಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಲು ನೆರವಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.

ಗುರುವಾರ (ಅ 2) ಗಾಂಧಿ ಜಯಂತಿ ಹಿನ್ನಲೆಯಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಖಾದಿ ಇಂಡಿಯಾ ಶೋ ರೂಂಗೆ ಭೇಟಿ ನೀಡಿದ ಷಾ, ಪ್ರಧಾನಿ ಮೋದಿಯವರ ಇತ್ತೀಚಿನ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಸ್ವದೇಶಿ ಕಲ್ಪನೆಯನ್ನು ಉತ್ತೇಜಿಸಿದ್ದು, ದೇಶದ ಜನರು ಆರ್ಥಿಕ ಅಭಿವೃದ್ಧಿ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನದೊಂದಿಗೆ ಸಂಪರ್ಕ ಸಾಧಿಸಲು ಪ್ರೇರೇಪಿಸಿದ್ದಾರೆ ಎಂದರು.

ಇದರಿಂದ ಪ್ರೇರಿತರಾಗಿರುವ ದೇಶಾದ್ಯಂತ ಲಕ್ಷಾಂತರ ಕುಟುಂಬಗಳು ತಮ್ಮ ಮನೆಗಳಲ್ಲಿ ಯಾವುದೇ ವಿದೇಶಿ ವಸ್ತುಗಳನ್ನು ಬಳಸದಿರಲು ನಿರ್ಧರಿಸಿದ್ದಾರೆ. ಅದೇ ರೀತಿ, ಲಕ್ಷಾಂತರ ಅಂಗಡಿಯವರು ತಮ್ಮ ಅಂಗಡಿಗಳಲ್ಲಿ ಯಾವುದೇ ವಿದೇಶಿ ಉತ್ಪನ್ನಗಳನ್ನು ಮಾರಾಟ ಮಾಡದಿರಲು ಸಂಕಲ್ಪ ಮಾಡಿದ್ದಾರೆ" ಎಂದು ಹೇಳಿದರು. ನಾವು ಸ್ಥಳೀಯ ಉತ್ಪನ್ನಗಳನ್ನು ಅಳವಡಿಸಿಕೊಳ್ಳುವಾಗ, 2047 ರ ವೇಳೆಗೆ ಭಾರತವನ್ನು ವಿಶ್ವದ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಅಭಿಯಾನದೊಂದಿಗೆ ನಾವು ನಮ್ಮನ್ನು ಜೋಡಿಸಿಕೊಳ್ಳುತ್ತೇವೆ ಎಂದು ಸ್ವದೇಶಿ ಅಭಿಯಾನದ ಕುರಿತು ಮಾತನಾಡಿದರು. ಪ್ರಧಾನಿ ಮೋದಿ ಪ್ರಾರಂಭಿಸಿರುವ ಖಾದಿ ಬಳಕೆಯನ್ನು ಉತ್ತೇಜಿಸುವ ಮತ್ತು ಸ್ವದೇಶಿ ಬಳಕೆಯನ್ನು ಅಳವಡಿಸಿಕೊಳ್ಳುವ ಎರಡೂ ಅಭಿಯಾನಗಳು ನಮ್ಮನ್ನು ಸಬಲೀಕರಣಗೊಳಿಸಬೇಕು. ನಾವು ಈ ಅಭಿಯಾನಗಳನ್ನು ನಮ್ಮ ಸ್ವಭಾವದ ಭಾಗವನ್ನಾಗಿ ಮಾಡಿಕೊಂಡು ನಮ್ಮ ಮುಂದಿನ ಪೀಳಿಗೆಗೆ ರವಾನಿಸಬೇಕು ಎಂದರು.

ಖಾದಿಯ ಪರಿಕಲ್ಪನೆಗಳನ್ನು ಪರಿಚಯಿಸಿದ ಮಹಾತ್ಮ ಗಾಂಧಿ

ಭವಿಷ್ಯದ ಭಾರತದ ನಕ್ಷೆಯನ್ನು ರೂಪಿಸಿದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧಿಯವರು ಅನೇಕ ವಿಷಯಗಳನ್ನು ಹೆಣೆದಿದ್ದಾರೆ ಎಂದ ಗೃಹ ಸಚಿವ ಷಾ, ನಾವು ಸ್ವಾತಂತ್ರ್ಯ ಚಳವಳಿಯನ್ನು ಖಾದಿ ಮತ್ತು ಸ್ವದೇಶಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದರು. ದೇಶಕ್ಕೆ ಸ್ವದೇಶಿ ಮತ್ತು ಖಾದಿಯ ಪರಿಕಲ್ಪನೆಗಳನ್ನು ಪರಿಚಯಿಸುವ ಮೂಲಕ, ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಚಳವಳಿಯನ್ನು ವೇಗಗೊಳಿಸಿದರು ಮಾತ್ರವಲ್ಲದೆ ಅನೇಕ ಬಡ ಜನರ ಜೀವನಕ್ಕೆ ಬೆಳಕು ತಂದರು. ದೀರ್ಘಕಾಲದವರೆಗೆ, ಖಾದಿ ಮತ್ತು ಸ್ವದೇಶಿ ಎರಡನ್ನೂ ಮರೆತುಬಿಡಲಾಯಿತು, ಮೋದಿ ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ಖಾದಿ ಸಾರ್ವಜನಿಕರಿಗೆ ಉಪಯುಕ್ತ ವಸ್ತುವಾಗಿತ್ತು ಮತ್ತು ಕಳೆದ ಹತ್ತು ವರ್ಷಗಳಿಂದ ಉತ್ಪನ್ನಗಳ ಬಳಕೆ ಮತ್ತು ಖರೀದಿಯಲ್ಲಿನ ಸಾಕಷ್ಟು ಹೆಚ್ಚಳವಾಗಿರುವುದು ಇದಕ್ಕೆ ತಾಜಾ ಉದಾಹರಣೆ ಎಂದರು.

ಪ್ರಧಾನಿಯಾಗಿ ನರೇಂದ್ರ ಮೋದಿ 11 ವರ್ಷಗಳ ಅಧಿಕಾರಾವಧಿಯಲ್ಲಿ, ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಉತ್ಪನ್ನಗಳ ಮಾರಾಟವು ಐದು ಪಟ್ಟು ಹೆಚ್ಚಾಗಿದ್ದು, 33,000 ಕೋಟಿ ರೂಪಾಯಿಗಳಿಂದ, 1.7 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಎಂದು ಇದೇ ವೇಳೆ ತಿಳಿಸಿದರು.(ಏಜೆನ್ಸೀಸ್)