ನವದೆಹಲಿ: ಅತಿವೃಷ್ಟಿಯಿಂದ ಹಾನಿಗೊಳಗಾದ ಕರ್ನಾಟಕದ 70,000 (ಫ್ಲೂ ಕ್ಯೂರ್ಡ್ ವರ್ಜೀನಿಯಾ) ಎಫ್.ಸಿ.ವಿ ತಂಬಾಕು ಬೆಳೆಗಾರರಿಗೆ ಭಾರತ ಸರ್ಕಾರ ಮಹತ್ವದ ನೆರವು ಘೋಷಿಸಿದೆ(Announcement of assistance to 70000 tobacco growers of Karnataka by Central Government).
ಸಂಕಷ್ಟದಲ್ಲಿದ್ದ ಕರ್ನಾಟಕದ ತಂಬಾಕು ಬೆಳೆಗಾರರ ನೆರವಿಗೆ ಧಾವಿಸುವ ಕೇಂದ್ರ ಸರ್ಕಾರಕ್ಕೆ ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಕೃತಜ್ಞತೆ ಸಲ್ಲಿಸಿದ್ದಾರೆ.
ಹೆಚ್ಚುವರಿ ಶುಲ್ಕವಿಲ್ಲದೆ ತಂಬಾಕು ಮಂಡಳಿಯ ಹರಾಜಿನಲ್ಲಿ ಹೆಚ್ಚುವರಿ ಮತ್ತು ಅನಧಿಕೃತ ತಂಬಾಕು ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಣಾಯಕ ಮಹತ್ವದ ತೀರ್ಮಾನದಿಂದ ನಷ್ಟಕ್ಕೊಳಗಾದ ರೈತರಿಗೆ ನೆರವಾಗಲಿದೆ. ರೈತರು ತಮ್ಮ ವೃತ್ತಿ ಬದುಕು ಉಳಿಸಿಕೊಳ್ಳಲು ಮತ್ತು ವೆಚ್ಚಗಳನ್ನು ನಿರ್ವಹಿಸಲು ಸಹಾಯವಾಗಿದೆ. ನಮ್ಮ ರಾಜ್ಯದ ತಂಬಾಕು ಬೆಳೆಗಾರರಿಗೆ ಅಗತ್ಯವಿದ್ದ ಪರಿಹಾರವನ್ನು ಒದಗಿಸಲಾಗಿದೆ.
ಕರ್ನಾಟಕದ ಕೃಷಿ ಕ್ಷೇತ್ರದ ಪ್ರಗತಿ ಮತ್ತು ರೈತರ ಏಳಿಗೆಗೆ ಕೇಂದ್ರ ಸರ್ಕಾರ ಈ ರೀತಿಯಲ್ಲಿ ಬದ್ಧತೆಯನ್ನು ತೋರಿರುವುದು ಅತ್ಯಂತ ಶ್ಲಾಘನೀಯ ಎಂದು ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಸುಮಾರು ಶೇ.85 ಎಫ್.ಸಿ.ವಿ ತಂಬಾಕು ಬೆಳೆಯಲಾಗುವ ಪ್ರದೇಶವಾಗಿದ್ದು, ಮುಖ್ಯವಾಗಿ ಮೈಸೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಮತ್ತು ಕೆ.ಆರ್.ನಗರ ಮತ್ತು ಉಳಿದಂತೆ ಸುಮಾರು ಶೇ.15 ಪ್ರದೇಶ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕೆಲವು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಸೂಚನೆ ಉಲ್ಲೇಖಿಸಿ ಹೇಳಿದ್ದಾರೆ.