ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ದುಬಾರಿ ವಾಚ್ ಖರೀದಿ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು 5 ಲಕ್ಷ ರೂ. ಮೌಲ್ಯದ ರಫೇಲ್ ವಾಚ್ ಖರೀದಿಸಿದ್ದು, ಅದರ ರಶೀದಿಯನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಸವಾಲು ಎಸೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದುಬಾರಿ ವಾಚ್ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಕೊಯಮತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅಣ್ಣಾಮಲೈ ಕೂಡ ಸ್ಪಷ್ಟನೆ ನೀಡಿದ್ದಾರೆ. ಇದುವರೆಗೂ ನಾನು ಧರಿಸುತ್ತಿದ್ದ ಶರ್ಟ್, ಪ್ಯಾಂಟ್, ಪಂಚೆ ಹಾಗೂ ನಾನು ಬಳಸುತ್ತಿದ್ದ ಕಾರು ಇವುಗಳನ್ನು ಹೋಲಿಕೆ ಮಾಡಿ ಮಾತನಾಡುತ್ತಿದ್ದವರು. ಇದೀಗ ಹೊಸ ಚರ್ಚೆ ಆರಂಭಿಸಿದ್ದಾರೆ. ನನ್ನ ವಾಚ್ ಬಗ್ಗೆ ಮಾತನಾಡುತ್ತಿದ್ದಾರೆ.
ನಾನು ಕಟ್ಟಿರುವುದು ರಫೇಲ್ ವಾಚ್. ಭಾರತಕ್ಕೆ ಫ್ರಾನ್ಸ್ನಿಂದ ಬಂದ ರಫೇಲ್ ವಿಮಾನಕ್ಕೂ ಇದಕ್ಕೂ ಸಂಬಂಧ ಇದೆ. ರಫೇಲ್ ವಿಮಾನಗಳ ಬಿಡಿ ಭಾಗಗಳನ್ನು ಬಳಸಿ ಕೇವಲ 500 ವಾಚ್ಗಳನ್ನು ತಯಾರಿಸಲಾಗಿದೆ. ಇದೊಂದು ವಿಶೇಷ ರಫೇಲ್ ಆವೃತ್ತಿಯಾಗಿದೆ. ರಫೇಲ್ ವಿಮಾನದಲ್ಲಿ ಯಾವೆಲ್ಲ ಭಾಗಗಳು ಇವೆಯೋ ಅದೆಲ್ಲ ನಾನು ಕಟ್ಟಿರುವ ವಾಚ್ನಲ್ಲಿ ಇದೆ. ನಾನೊಬ್ಬ ರಾಷ್ಟ್ರಪ್ರೇಮಿ. ನನಗೆ ರಫೇಲ್ ವಿಮಾನವನ್ನು ಓಡಿಸುವ ಭಾಗ್ಯ ದೊರೆಯಲಿಲ್ಲ. ಅದಕ್ಕಾಗಿ ನಾನು ರಫೇಲ್ ವಿಮಾನದ ಭಾಗಗಳಿಂದ ತಯಾರಿಸಿದ ವಾಚ್ ಅನ್ನು ಧರಿಸುತ್ತಿದ್ದೇನೆ. ಇದು ದೇಶ ಪ್ರೇಮದ ಸಂಕೇತ ಎಂದು ಅಣ್ಣಾಮಲೈ ಹೇಳಿದರು.
ಇಡೀ ವಿಶ್ವದಲ್ಲಿ ಕೇವಲ 500 ರಫೇಲ್ ವಾಚ್ಗಳು ಮಾತ್ರ ಇವೆ. ಈ ವಾಚ್ಗಳನ್ನು ರಫೇಲ್ ವಿಮಾನ ನಿರ್ಮಾಣ ಮಾಡುವ ಡಸಾಲ್ಟ್ ಏವಿಯೇಷನ್ ತಯಾರು ಮಾಡಿದೆ. ನನಗಂತೂ ರಫೇಲ್ ವಿಮಾನ ಓಡಿಸುವ ಅದೃಷ್ಟ ಇಲ್ಲ. ಹೀಗಾಗಿ ನನ್ನ ಉಸಿರು ಇರೋವರೆಗೂ ನಾನು ಈ ವಾಚ್ ಅನ್ನು ಧರಿಸುತ್ತೇನೆ. ಈ ವಾಚ್ ಅನ್ನು ಭಾರತೀಯರು ಬಿಟ್ಟರೆ ಇನ್ಯಾರು ಖರೀದಿ ಮಾಡುತ್ತಾರೆ. ನಾವೇ ತಾನೇ ಖರೀದಿಸಬೇಕು. ರಫೇಲ್ ವಿಮಾನ ಬಂದ ಮೇಲೆ ಭಾರತದ ವಾಯುಶಕ್ತಿ ಇನ್ನಷ್ಟು ಹೆಚ್ಚಿದೆ. ನಾನೊಬ್ಬ ದೇಶ ಪ್ರೇಮಿ ಆಗಿರುವುದರಿಂದ ಈ ರಫೇಲ್ ವಾಚ್ ಖರೀದಿ ಮಾಡಿದ್ದೇನೆ ಎಂದರು.
ನನ್ನ ವಾಚ್ ಯಾವುದು? ಯಾವ ಕಂಪನಿಯದ್ದು? ಎಂದು ಸಚಿವರು ಕೇಳಿದ್ದಾರೆ. ನಾನು ವಾಚ್ ಬಗ್ಗೆ ತಿಳಿಸಿದ್ದೇನೆ. ಹೆಚ್ಚಿನ ಮಾಹಿತಿ ಬೇಕಾದರೆ ರಫೇಲ್ ಬಗ್ಗೆ ತಿಳಿಯಿರಿ. ಭಾರತದ ಶತ್ರುಗಳು ಒಳಗಡೆಯೇ ಇದ್ದಾರೆ. ಚೀನಾ ಮತ್ತು ಪಾಕಿಸ್ತಾನದ ಏಜೆಂಟ್ಗಳು ನಮ್ಮಲ್ಲಿಯೇ ಇದ್ದಾರೆ. ಅವರಿಗೆ ಏನು ಉತ್ತರ ಕೊಡಬೇಕು ಕೊಟ್ಟಿದ್ದೇನೆ. ಇದು ಮೊದಲಿನ ಭಾರತವಲ್ಲ. ಇದು ಮೋದಿಜಿ ಅವರ ಭಾರತ ಎಂದು ಟೀಕಾಕಾರರಿಗೆ ಅಣ್ಣಾಮಲೈ ತಿರುಗೇಟು ನೀಡಿದರು.
ತಮಿಳುನಾಡು ಸಚಿವ ಹೇಳಿದ್ದೇನು?
ಇದು ರಫೇಲ್ ವಾಚ್. ವಿಶ್ವದಲ್ಲಿ ಕೇವಲ 500 ವಾಚ್ಗಳನ್ನು ತಯಾರಿಸಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ವೆಚ್ಚದ ರಫೇಲ್ ವಾಚ್ ಅನ್ನು ಕೇವಲ 4 ಕುರಿಗಳ ಮಾಲಿಕ ಎಂದು ಹೇಳಿಕೊಳ್ಳುವ ವ್ಯಕ್ತಿ ಕೈಯಲ್ಲಿ ಹೇಗೆ ಬಂತು? ಒಂದು ಗಂಟೆಯೊಳಗೆ ಅವರು ಖರೀದಿಸಿದ ರಸೀದಿಯನ್ನು ನೀಡಿದರೆ, ಸಾಮಾನ್ಯ ಜನರು ಸಹ ಆನಂದಿಸಬಹುದು. ರಶೀದಿಯನ್ನು ಎಂದಿನಂತೆ ಎಕ್ಸೆಲ್ ಶೀಟ್ ಮೂಲಕ ಮೋಸಗೊಳಸಬಹುದು ಎಂದು ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್)