ನ್ಯೂಸ್

ತಮಿಳುನಾಡು ಬಿಜೆಪಿ ಅಧ್ಯಕ್ಷ ರೇಸ್​ನಿಂದ ಅಣ್ಣಾಮಲೈ ಔಟ್?

ಚೆನ್ನೈ: ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷರಾಗಿ ಮುಂದುವರಿಯುವ ಇರಾದೆ ತಮಗಿಲ್ಲ ಎಂದು ಹೇಳುವ ಮೂಲಕ ಕೆ. ಅಣ್ಣಾಮಲೈ ಈ ಸ್ಥಾನದಿಂದ ನಿರ್ಗಮಿಸುವುದನ್ನು ಖಚಿತಪಡಿಸಿದ್ದಾರೆ. ಮುಂದಿನ ಅಧ್ಯಕ್ಷರು ಸರ್ವಾನುಮತದಿಂದ ಆಯ್ಕೆಯಾಗಲಿದ್ದಾರೆಂದು ಅಣ್ಣಾಮಲೈ ಶುಕ್ರವಾರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಉದ್ದೇಶದಿಂದ ಅಣ್ಣಾಮಲೈಯವರನ್ನು ರಾಜ್ಯ ಬಿಜೆಪಿ ಮುಖ್ಯಸ್ಥನ ಹುದ್ದೆಯಿಂದ ಹೊರಗಿಡಲು ಎಐಎಡಿಎಂಕೆ ಬಯಸಿತ್ತು ಎಂಬ ವರದಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲು ಕರ್ನಾಟಕದ ಮಾಜಿ ಅಧಿಕಾರಿ ನಿರಾಕರಿಸಿದರು. ‘ಬಿಜೆಪಿ ಮುಂಬರುವ ಎಲ್ಲ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಹೊಸ ಅಧ್ಯಕ್ಷರ ಚುನಾವಣೆ ವೇಳೆ ನಾವು ಮಾತನಾಡುತ್ತೇವೆ’ ಎಂದ ಅಣ್ಣಾಮಲೈ, ಚುನಾವಣೆ ಶೀಘ್ರವೇ ನಡೆಯಲಿದೆ ಎಂದರು. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಅಣ್ಣಾಮಲೈ ಹೇಳಿದರು. ಭ್ರಷ್ಟಾಚಾರವನ್ನು ವಿರೋಧಿಸಲು ತಾವು ರಾಜಕೀಯಕ್ಕೆ ಬಂದಿದ್ದು ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು.