ನ್ಯೂಸ್

ಅಣ್ಣಾ ಯೂನಿವರ್ಸಿಟಿ Sexual Assault Case; ಎಸ್​ಐಟಿ ತನಿಖೆಗೆ ಆದೇಶಿಸಿದ ಹೈಕೋರ್ಟ್​​

ಚೆನ್ನೈ: ತಮಿಳುನಾಡಿನ ರಾಜಧಾನಿಯಲ್ಲಿರುವ ಅಣ್ಣಾ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ(Sexual Assault Case) ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಶನಿವಾರ(ಡಿಸೆಂಬರ್​ 28) ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಆದೇಶಿಸಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಪ್ರಕರಣದಲ್ಲಿ ಎಫ್‌ಐಆರ್ ಸೋರಿಕೆಯಾಗಿರುವ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ ಮತ್ತು ವಿ ಲಕ್ಷ್ಮೀನಾರಾಯಣ ಅವರಿದ್ದ ಪೀಠವು, ಪ್ರಥಮ ಮಾಹಿತಿ ವರದಿಯಲ್ಲಿನ ವಿವರಗಳ ಸೋರಿಕೆಯ ಕಾರಣದಿಂದಾಗಿ ಸಂತ್ರಸ್ತೆ ಗುರುತು ಬಹಿರಂಗವಾಗಿದೆ. ಎಫ್‌ಐಆರ್ ಸೋರಿಕೆಯಿಂದ ಉಂಟಾದ ಆಘಾತಕ್ಕಾಗಿ ಸಂತ್ರಸ್ತರಿಗೆ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ದ್ವಿತೀಯ ವರ್ಷದ ವಿದ್ಯಾರ್ಥಿನಿ ಹಾಗೂ ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವಂತೆ ತಮಿಳುನಾಡು ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.

ಘಟನೆಯ ವಿವರ

ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ(Sexually Assault) ಎಸಗಿದ ಘಟನೆ ಡಿಸೆಂಬರ್ 24ರಂದು ಬೆಳಕಿಗೆ ಬಂದಿದೆ. ಡಿಸೆಂಬರ್ 23 ರಂದು ಸಂಜೆ ಕ್ಯಾಂಪಸ್​​ ಆವರಣದೊಳಗೆ ಈ ಘಟನೆ ನಡೆದಿದೆ.ವಿದ್ಯಾರ್ಥಿನಿಯು ಕ್ಯಾಂಪಸ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ತೆರೆದ ಪ್ರದೇಶದಲ್ಲಿ ಕುಳಿತಿದ್ದಳು. ಅಲ್ಲಿಗೆ ಬಂದ ಅಪರಿಚಿತ ಇಬ್ಬರು ಪುರುಷರು ಆಕೆಯ ಸ್ನೇಹಿತನನ್ನು ಥಳಿಸಿ ನಂತರ ಆಕೆಯನ್ನು ಪೊದೆಯೊಳಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ವರದಿಯಾಗಿದೆ.

ತನಿಖೆಯ ನಂತರ ಪೊಲೀಸರು ಜ್ಞಾನಶೇಖರನ್ ಎಂಬ 37 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶಂಕಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈತ ರಸ್ತೆ ಬದಿ ಬಿರಿಯಾನಿ ಅಂಗಡಿ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​​)