ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಭಾನುವಾರ (ಸೆಪ್ಟೆಂಬರ್ 15) ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಜ್ರಿವಾಲ್ ಅವರಿಗೆ ರಾಜಕೀಯಕ್ಕೆ ಪ್ರವೇಶಿಸದಂತೆ ಬಹಳ ಹಿಂದೆಯೇ ಸಲಹೆ ನೀಡಿದೆ ಎಂದು ಹೇಳಿದರು.
ಈ ಹಿಂದೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅರವಿಂದ್ ಕೇಜ್ರಿವಾಲ್ ಜತಗೆ ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತೃತ್ವ ವಹಿಸಿದ್ದ ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು, ರಾಜಕೀಯಕ್ಕೆ ಬರದಂತೆ ಕೇಜ್ರಿವಾಲ್ ಅವರಿಗೆ ಬಹಳ ಹಿಂದೆಯೇ ಸಲಹೆ ನೀಡಿದ್ದೆ. ಅಲ್ಲದೆ ಸಮಾಜಸೇವೆಯಲ್ಲಿ ನಿಜವಾದ ಸಾಧನೆ ಅಡಗಿದೆ ಎಂದು ಹಲವು ಬಾರಿ ವಿವರಿಸಿದ್ದೇನೆ. ಆದರೆ ಅವರು ಕೇಳಲಿಲ್ಲ ಎಂದು ತಿಳಿಸಿದರು.
ಈಗ ನಡೆದಿರುವುದು ಅನಿವಾರ್ಯವಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ಹೃದಯದಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ ಎಂದು ಹಜಾರೆ ಹೇಳಿದರು.
ಅಂದ್ಹಾಗೆ ಅರವಿಂದ್ ಕೇಜ್ರಿವಾಲ್ ಅವರ ವಿಚಾರವಾಗಿ ಆಗಿರುವ ಬೆಳವಣಿಗೆಗೆ ಅಣ್ಣಾ ಹಜಾರೆ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆಯೂ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಬಂಧನವಾದಾಗ ಅಣ್ಣಾ ಹಜಾರೆ ಅಸಮಾಧಾನ ಹೊರಹಾಕಿದ್ದರು.
ಆ ಸಮಯದಲ್ಲಿ ಹಜಾರೆ ಅವರು ಒಂದು ಕಾಲದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಮತ್ತು ಮದ್ಯದ ವಿರುದ್ಧ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್ ಅವರು ಈಗ ಮದ್ಯದ ನೀತಿಗಳನ್ನು ರೂಪಿಸುವಲ್ಲಿ ತೊಡಗಿದ್ದಾರೆ ಎಂಬುದು ನನಗೆ ತೀವ್ರ ಬೇಸರವಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದ್ದರು. ಅವರ ಬಂಧನ ಅವರ ಕೆಲಸದ ಪರಿಣಾಮವಾಗಿದೆ ಎಂದಿದ್ದರು.
ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದ ಎರಡು ದಿನಗಳ ನಂತರ ಸಿಎಂ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ದೆಹಲಿಯ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದ ಕೇಜ್ರಿವಾಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, 2 ದಿನಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ನ್ಯಾಯಾಲಯದಿಂದ ನನಗೆ ನ್ಯಾಯ ಸಿಕ್ಕಿದೆ ಈಗ ಸಾರ್ವಜನಿಕ ನ್ಯಾಯಾಲಯ ನ್ಯಾಯ ನೀಡಲಿದೆ ಎಂದು ಹೇಳಿದರು.(ಏಜೆನ್ಸೀಸ್)