ನ್ಯೂಸ್

ಅಂಕಿತಾ ಭಂಡಾರಿ ಕೊಲೆ ಪ್ರಕರಣ; ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ| kotdwar-court

ಡೆಹ್ರಾಡೂನ್: ಸೆಪ್ಟೆಂಬರ್ 2022 ರಿಂದ ದೇಶದ ಗಮನ ಸೆಳೆದಿರುವ ಹೈಪ್ರೊಫೈಲ್ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಕೋಟ್ವಾರ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಂದು (30) ತನ್ನ ತೀರ್ಪನ್ನು ಪ್ರಕಟಿಸಿದೆ. ಉತ್ತರಾಖಂಡದ ರೆಸಾರ್ಟ್ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಂಕಿತಾ ಪೌರಿ ಜಿಲ್ಲೆಯ ನಿವಾಸಿಯಾಗಿದ್ದು, ಹೃಷಿಕೇಶದ ವನಂತರಾ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅತಿಥಿಗಳಿಗೆ ಹೆಚ್ಚುವರಿ ಸೇವೆ ನೀಡಲು ನಿರಾಕರಿಸಿದಾಗ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪುಲ್ಕಿತ್ ಆರ್ಯ ಮತ್ತು ಅವರ ಇಬ್ಬರು ಸಹಚರರು ಆಕೆಯನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಉತ್ತರಾಖಂಡದ ರೆಸಾರ್ಟ್ ಮಾಲೀಕ, ಇಬ್ಬರು ಉದ್ಯೋಗಿಗಳು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

19 ವರ್ಷದ ಭಂಡಾರಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬಳಿಕ ಆಕೆಯ ಮೃತದೇಹವನ್ನು ಚೀಲಾ ಶಕ್ತಿ ಕಾಲುವೆಗೆ ಎಸೆಯಲಾಗಿತ್ತು. ತದನಂತರ ಒಂದುವಾರದ ಬಳಿಕ ಮೃತದೇಹ ಪತ್ತೆಯಾಗಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ತನಿಖೆ ನಡೆಸಿದ ಎಸ್ ಐಟಿ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.

ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ಉತ್ತರಾಖಂಡ್​ನ ಬಿಜೆಪಿಯ ಮಾಜಿ ಸಚಿವರೊಬ್ಬರ ಪುತ್ರನಾಗಿದ್ದಾನೆ. ಎಲ್ಲಾ ಆರೋಪಿಗಳಿಗೆ ನ್ಯಾಯಾಲಯ ರೂ.50,000 ದಂಡ ವಿಧಿಸಿದ್ದು, ರೂ. 4 ಲಕ್ಷವನ್ನು ಅಂಕಿತಾ ಕುಟುಂಬಕ್ಕೆ ನೀಡುವಂತೆ ನ್ಯಾಯಾಲಯ ಆರೋಪಿಗಳಿಗೆ ಆದೇಶಿಸಿದೆ.

ಆರೋಪಿಗಳಾದ ಪುಲ್ಕಿತ್ ಆರ್ಯ, ಸೌರಭ್ ಭಾಸ್ಕರ್ ಮತ್ತು ಅಂಕಿತ ಗುಪ್ತಾ ಅವರು ಐಪಿಸಿ ಸೆಕ್ಷನ್ 302 ( ಕೊಲೆ) 201 (ಸಾಕ್ಷ್ಯ ನಾಶ) 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 354 (ಮಹಿಳೆ ವಿರುದ್ಧ ಕ್ರಿಮಿನಲ್ ಶಕ್ತಿ ಬಳಕೆ) ಆರೋಪದಡಿ ದೋಷಿಗಳು ಎಂದು ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ರೀನಾ ನೆಗಿ ಅವರನ್ನೊಳಗೊಂಡ ನ್ಯಾಯಾಲಯ ತೀರ್ಪು ನೀಡಿದೆ.

(ಏಜೆನ್ಸೀಸ್)