ನ್ಯೂಸ್

ಕುಂಭಮೇಳ ಕಾಲ್ತುಳಿತದಲ್ಲಿ ಅನೇಕ ಮಂದಿಯ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೊಲೀಸ್​ ಅಧಿಕಾರಿ | Anjani Kumar Roy

Anjani Kumar Roy : ಉತ್ತರ ಪ್ರದೇಶದ ಪವಿತ್ರ ನಗರಿ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ಆಚರಣೆ ನಡೆಯುತ್ತಿದೆ. ಇತ್ತೀಚೆಗೆ ಒಂದು ಭೀಕರ ದುರಂತ ಕೂಡ ಸಂಭವಿಸಿತು. ಭಕ್ತರು ಪವಿತ್ರ ಸ್ನಾನ ಮಾಡುವಾಗ ಇದ್ದಕ್ಕಿದ್ದಂತೆ ಕಾಲ್ತುಳಿತ ಸಂಭವಿಸಿ ಭಯದ ವಾತಾವರಣ ಸೃಷ್ಟಿಯಾಯಿತು. ಈ ಅನಿರೀಕ್ಷಿತ ಘಟನೆಯಿಂದಾಗಿ ಕೆಲವರು ತಮ್ಮ ಪ್ರಾಣ ಕಳೆದುಕೊಂಡರು.

ಈ ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತರಲ್ಲಿ 19 ಮಂದಿ ಉತ್ತರ ಪ್ರದೇಶದವರಾಗಿದ್ದು, ಉಳಿದವರು ಕರ್ನಾಟಕ, ಗುಜರಾತ್ ಮತ್ತು ಅಸ್ಸಾಂ ರಾಜ್ಯದವರು.

ಈ ಭೀಕರ ಅಪಘಾತದಲ್ಲಿ ಅನೇಕ ಭಕ್ತರನ್ನು ರಕ್ಷಿಸಿದ ನಿಜವಾದ ನಾಯಕನೊಬ್ಬ ಇದ್ದಾನೆ. ಅವರೇ ಸಬ್​ ಇನ್ಸ್​ಪೆಕ್ಟರ್​ ಅಂಜನಿ ಕುಮಾರ್ ರಾಯ್. ಗಾಜಿಯಾಬಾದ್ ಜಿಲ್ಲೆಯ ಬಸುಖಾ ಮತ್ತು ಮುಹಮ್ಮದಾಬಾದ್‌ನ ಸ್ಥಳೀಯರಾದ ಅಂಜನಿ ಕುಮಾರ್ ರಾಯ್, ಬಹ್ರೈಚ್ ಪೊಲೀಸ್ ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಹಾಕುಂಭಮೇಳದ ಭದ್ರತೆಗಾಗಿ ಅವರನ್ನು ಪ್ರಯಾಗ್‌ರಾಜ್‌ಗೆ ನಿಯೋಜಿಸಲಾಯಿತು.

ಕಾಲ್ತುಳಿತದ ಸಮಯದಲ್ಲಿ ಅಂಜನಿ ಕುಮಾರ್​ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅನೇಕ ಭಕ್ತರನ್ನು ಉಳಿಸಿದರು. ಅವರೇ ಖುದ್ದಾಗಿ ಹಲವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಆದಾಗ್ಯೂ, ಈ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಅಂಜನಿ ಕುಮಾರ್ ರಾಯ್ ಅವರು ತೀವ್ರ ಅಸ್ವಸ್ಥರಾದರು. ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಅನುಭವಿಸಿ, ಹತ್ತಿರದ ಕುಂಭಮೇಳ ಆಸ್ಪತ್ರೆಗೆ ಹೋದರು. ಈ ವೇಳೆ ವೈದ್ಯರು ಅವರನ್ನು ಪರೀಕ್ಷಿಸಿ, ಔಷಧಿ ನೀಡಿ ಕಳುಹಿಸಿದರು.

ಸ್ವಲ್ಪ ಚೇತರಿಸಿಕೊಂಡ ನಂತರ, ಅಂಜನಿ ಕುಮಾರ್ ರಾಯ್​ ಅವರು ತಮ್ಮ ಕರ್ತವ್ಯವನ್ನು ಮತ್ತೆ ಆರಂಭಿಸಿದರು. ಆದರೆ, ಕೆಲವೇ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಈ ವೇಳೆ ಬಾಯಿಯಲ್ಲಿ ನೊರೆ ಬರುತ್ತಿತ್ತು. ಬಹ್ರೈಚ್‌ನಿಂದ ಅವರೊಂದಿಗೆ ಬಂದಿದ್ದ ಅವರ ಸೋದರಳಿಯ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ಸಾಕಷ್ಟು ಹಾನಿಯುಂಟಾಗಿತ್ತು. ಅಂಜನಿ ಕುಮಾರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.

ಇನ್ನು ಕಾಲ್ತುಳಿತ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದಾರೆ. ಅಪಘಾತದ ತನಿಖೆಗಾಗಿ ನ್ಯಾಯಾಂಗ ಆಯೋಗವನ್ನು ರಚಿಸಲಾಗಿದೆ.

ಅಂದಹಾಗೆ ಅಂಜನಿ ಕುಮಾರ್ ರಾಯ್ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಅನೇಕ ಭಕ್ತರ ಜೀವಗಳನ್ನು ಉಳಿಸಿದ್ದಾರೆ. ಅವರು ಮಾಡಿದ ಈ ತ್ಯಾಗ ಅಮೂಲ್ಯವಾದುದು. ನಿಜವಾದ ನಾಯಕ ಯಾವಾಗಲೂ ತನ್ನ ಬಗ್ಗೆ ಅಲ್ಲ, ಇತರರ ಬಗ್ಗೆ ಯೋಚಿಸುತ್ತಾನೆ ಎಂಬುದಕ್ಕೆ ಅಂಜನಿ ಕುಮಾರ್ ರಾಯ್ ಸಾಕ್ಷಿಯಾಗಿದ್ದಾರೆ. (ಏಜೆನ್ಸೀಸ್​)