ಶಿವು ಹುಣಸೂರು
ಏಳು ನೂರು ವರ್ಷಗಳ ಇತಿಹಾಸ ಹೊಂದಿರುವ ದಕ್ಷಿಣಾಭಿಮುಖವಾಗಿ ಹಾರುತ್ತಿರುವ ಭಂಗಿಯಲ್ಲಿರುವ ಶ್ರೀ ಆಂಜನೇಯಸ್ವಾಮಿ ಮೂರ್ತಿ ನೋಡಲು ಎಷ್ಟು ಅಂದವೋ, ಅದರ ಕಾರ್ಣೀಕಗಳು ಕೂಡ ಅಷ್ಟೇ ಪ್ರಖರ. ಫಲಪ್ರದವೂ ಹೌದು.
ಹುಣಸೂರು ನಗರದ ಮಂಜುನಾಥ ಬಡಾವಣೆಯ ಬಳಿಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇಗುಲದ ಹನುಮನ ವೈಶಿಷ್ಟೃಗಳು ಒಂದೇ ಎರಡೇ.. ಯಾವುದೇ ಶಿಲ್ಪಿಯ ಕೆತ್ತನೆಯಿಂದ ಮೂಡಿಬಂದ ಮೂರ್ತಿ ಇದಲ್ಲ. 7 ಶತಮಾನಗಳ ಹಿಂದೆ ಭೂಮಿಯಿಂದ ಉದ್ಘವಮೂರ್ತಿಯಾಗಿ ಹೊರಬಂದು ಇಂದಿಗೂ ತನ್ನ ಆಕಾರವನ್ನು ವೃದ್ಧಿಸುತ್ತಲೇ ಇರುವ ಈ ಅಂಜನಾನಂದ ಅತ್ತುಕರೆದು ಬರುವ ಭಕ್ತರಿಗೊಲಿಯುವ ಕರುಣಾಮೂರ್ತಿಯಾಗಿದ್ದಾರೆ.
ಗುಡಿ ಪುಟ್ಟದು ಪ್ರಭಾವ ದೊಡ್ಡದು: ಹುಣಸೂರಿನ ಜನಮಾನಸದಲ್ಲಿ ಇಂದಿಗೂ ನೆಲೆಯಾಗಿ ನಿಂತಿರುವ ಆಂಜನೇಯಸ್ವಾಮಿ ದೇಗುಲದಲ್ಲಿರುವ ಈ ಅಂಜನಾಸುತನನ್ನು ಇಷ್ಟಪಡದವರೇ ಇಲ್ಲ. ಪಡ್ಡೆ ಹುಡುಗರಿಂದ ಆರಂಭಗೊಂಡು ವಯೋವೃದ್ಧರಾದಿಯಾಗಿ ಎಲ್ಲರೂ ಹನುಮಭಕ್ತರೇ. ಹುಣಸೂರಿನಲ್ಲಿ ಪ್ರತಿವರ್ಷ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯುವ ಮೂರು ದಿನಗಳ ಹನುಮ ಜಯಂತಿ ಕಾರ್ಯಕ್ರಮಕ್ಕೆ ನಾಂದಿ ಹಾಡುವುದೇ ಈ ಹನುಮನ ದೇಗುಲದಿಂದ.
ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟಿರುವ ಈ ಗುಡಿಗೆ ದಾನಿಗಳ ನೆರವಿನಿಂದ ಗೋಡೆಗಳನ್ನು ಟೈಲ್ಸ್ ಮೂಲಕ ಭದ್ರಗೊಳಿಸಲಾಗಿದೆಯೇ ಹೊರತು ದೇವಾಲಯದ ಗೋಪುರ ಸೇರಿದಂತೆ ಯಾವುದೇ ರೂಪುರೇಷೆ ಬದಲಾಗಿಲ್ಲ. ದೇವಾಲಯದ ಮುಂಭಾಗವಿರುವ ಹನುಮತೀರ್ಥ ಕಲ್ಯಾಣಿ ಔಷಧೀಯ ಗುಣಗಳನ್ನು ಹೊಂದಿದ ಪುಷ್ಕರಣಿ ಎಂದೇ ಖ್ಯಾತಿ ಗಳಿಸಿದೆ. ಚರ್ಮರೋಗ ಸೇರಿದಂತೆ ವಿವಿಧ ರೋಗಬಾಧೆಗೆ ಕಲ್ಯಾಣಿಯ ನೀರು ದಿವ್ಯ ಔಷಧವಾಗಿದೆ ಎನ್ನುವುದನ್ನು ಭಕ್ತರು ಇಂದಿಗೂ ನಂಬುತ್ತಾರೆ.
ಕಾಲನ ಹೊಡೆತಕ್ಕೆ ಸಿಕ್ಕು ಕಲ್ಯಾಣಿ ಸಂಪೂರ್ಣ ದುಸ್ಥಿತಿ ತಲುಪಿದ್ದ ವೇಳೆ 2011ರಲ್ಲಿ ಪರಿಸರಪ್ರಿಯರು, ಹಿಂದುಪರ ಸಂಘಟನೆಗಳು ಒಂದಾಗಿ ಕಲ್ಯಾಣಿಯ ಪುನರುಜ್ಜೀವನ ಮಾಡಿದರು. ಇದೀಗ ಕಲ್ಯಾಣಿಯ ಈಶಾನ್ಯ ಮತ್ತು ವಾಯವ್ಯ ಮೂಲೆಯಿಂದ ನೀರಿನ ಸೆಲೆ ಚಿಮ್ಮುತ್ತಿದ್ದು, ಕಲ್ಯಾಣಿ ನೀರಿನಿಂದ ಕಂಗೊಳಿಸುತ್ತಿದೆ. ಕಲ್ಯಾಣಿಯ ಪುನರುಜ್ಜೀವನ ಕಾರ್ಯದ ವೇಳೆ ನೆಲದೊಳಗೆ ವಿಷ್ಣುವಿನ ಆಕರ್ಷಕ ಶಿಲಾವಿಗ್ರಹ ದೊರಕಿದ್ದು, ಚೋಳರ ಕಾಲದ ಕಲಾಶಿಲ್ಪವನ್ನು ಹೊಂದಿದೆ ಎಂದು ಅರ್ಚಕ ರವೀಂದ್ರ ಭಟ್ ತಿಳಿಸುತ್ತಾರೆ.
ಹೂವಿನಿಂದ ವರ ನೀಡುವ ಹನುಮ: ಹುಣಸೂರಿನ ಈ ವಾಯುಪುತ್ರನ ಕುರಿತು ಭಕ್ತರ ಅನುಭವಗಳು ವೈವಿಧ್ಯಮಯವಾಗಿದೆ. ತಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಎಂದು ತಿಳಿಯಲು ದೇವರ ತಲೆಯ ಮೇಲೊಂದು ಹೂವಿಟ್ಟು ಭಕ್ತಿಭಾವದಿಂದ ಪ್ರಾರ್ಥಿಸುವ ಭಕ್ತರಿಗೆ ಹೂವು ಬಲಗಡೆ ಬಿದ್ದಲ್ಲಿ ಕಾರ್ಯ ಸಿದ್ಧಿ ಅಥವಾ ಎಡಗಡೆ ಬಿದ್ದರೆ ಕಾರ್ಯವೈಫಲ್ಯದ ಸೂಚನೆ ನೀಡುತ್ತಾನೆ.
ಪಕ್ಕದ ಕೆ.ಆರ್.ನಗರದ ಗಾರೆಕೆಲಸದ ಕೂಲಿಕಾರ್ಮಿಕರೊಬ್ಬರಿಗೆ ದೇಗುಲದ ಅರ್ಚಕ ರವೀಂದ್ರಭಟ್ ಅವರ ಮೊಬೈಲ್ ಮೂಲಕ ಕರೆ ಹೋಗಿದ್ದು, ರಾತ್ರಿ ವೇಳೆ ತಮ್ಮ ಮೊಬೈಲ್‌ಗೆ ಕರೆ ಬಂದಿರುವುನ್ನು ಸ್ವೀಕರಿಸಿದ ಗಾರೆ ಕೆಲಸದವರಿಗೆ ಮೊಬೈಲ್ ಮೂಲಕ ಗಾಳಿ ಬೀಸುತ್ತಿರುವ ಶಬ್ದ ಕೇಳುತ್ತದೆ. ಮಾರನೆಯ ದಿನ ಮೊಬೈಲ್ ಯಾರದ್ದೆಂದು ಹುಡುಕಿದಾಗಿ ಆಂಜನೇಯಸ್ವಾಮಿ ದೇಗುಲದ ಅರ್ಚಕರದ್ದೆಂದು ತಿಳಿದು ಕೂಡಲೇ ಹುಣಸೂರಿಗೆ ಬಂದು ದೇವರ ದರ್ಶನ ಪಡೆದ ನಂತರ ಅವರ ಕಷ್ಟಗಳೆಲ್ಲಾ ಪರಿಹಾರವಾಗಿದೆ. ಬನ್ನಿಕುಪ್ಪೆಯ ದಂಪತಿಗೆ ಮದುವೆಯಾಗಿ 10 ವರ್ಷಗಳೇ ಕಳೆದರೂ ಸಂತಾನಫಲ ದೊರಕಲಿಲ್ಲವೆಂದು ನೊಂದು ಆಂಜನೇಯನಲ್ಲಿ ಪ್ರಾರ್ಥಿಸಿದ ನಂತರ ಪುತ್ರ ಸಂತಾನವಾಗಿ ಹನುಮಂತನೆಂದೇ ನಾಮಕರಣ ಮಾಡಿರುವ ಉದಾಹರಣೆ ಕಣ್ಣಮುಂದಿದೆ. ಉದ್ಯೋಗ, ಲಗ್ನ, ಭೂವಿವಾದ, ನ್ಯಾಯಾಲಯಗಳ ಪ್ರಕರಣಗಳು, ಕುಟುಂಬ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳನ್ನು ಹೊತ್ತು ತರುವ ಭಕ್ತರನ್ನು ಕಡೆಗಣಿಸದೇ ಕರುಣೆ ನೀಡುತ್ತಾನೆ. ಅದರಲ್ಲೂ ದೂರದೂರಿನಿಂದ ಬರುವ ಭಕ್ತರಿಗೆ ಎಂದಿಗೂ ವಾಯುಪುತ್ರ ಕೈಬಿಟ್ಟಿಲ್ಲವೆನ್ನುವುದು ಇಲ್ಲಿನ ನಂಬಿಕೆ.
ನೈವೇದ್ಯ ಸೇವಿಸುವ ಹನುಮ: ಇಲ್ಲಿನ ಆಂಜನೇಸ್ವಾಮಿಗೆ ಬಾಳೆಹಣ್ಣಿನ ರಸಾಯನ, ಬೆಣ್ಣೆ, ಜೇನುತುಪ್ಪವೆಂದರೆ ಬಲು ಇಷ್ಟ. ಬೆಣ್ಣೆ ಅಂಲಕಾರದ ದಿನ ದೇವರ ಮೈಮೇಲೆ ಹಾಕುವ ಬೆಣ್ಣೆ ನಂತರದಲ್ಲಿ ಪ್ರಸಾದವಾಗಿ ನೀಡುವಾಗ ಸಿಹಿಯಾಗಿರುತ್ತದೆ ಎನ್ನುವುದು ಭಕ್ತರ ಅಂಬೋಣ. ಇನ್ನು ಜೇನುತುಪ್ಪ ಅಭಿಷೇಕ ಮಾಡಿದಾಗ ಪವಾಡಗಳೇ ನಡೆದಿವೆ. ಒಂದು ಲೀಟರ್ ಜೇನುತುಪ್ಪ ಹಾಕಿದಾಗ ಮೂರ್ತಿಯ ಮೇಲೆ ಹರಿದು ಬರುವ ಜೇನುತುಪ್ಪದ ಪ್ರಮಾಣ ನಂತರದಲ್ಲಿ ಕಡಿಮೆಯಾಗಿರುತ್ತದೆ. ಅಂದರೆ ದೇವರು ನೈವೇದ್ಯವನ್ನು ಸ್ವೀಕರಿಸುತ್ತಿದ್ದಾನೆ ಎನ್ನು ನಂಬಿಕೆ ಭಕ್ತರದ್ದಾಗಿದೆ.
ಹಾರುವ ಭಂಗಿಯಲ್ಲಿ ವಾಯುಪುತ್ರ: ಗರ್ಭಗುಡಿಯಲ್ಲಿರುವ ಆಂಜನೇಯನ ಉದ್ಭವ ಮೂರ್ತಿ ಅತ್ಯಂತ ವೈಶಿಷ್ಟೃಪೂರ್ಣವಾಗಿದೆ. ಸುಮಾರು ಮಂಟಪದಿಂದ ಮೇಲೆ ಮೂರು ಅಡಿ ಎತ್ತರದ ಮೂರ್ತಿ ಇದಾಗಿದೆ. ಆಂಜನೇಯನ ದೇಹ ಸಂಪೂರ್ಣವಾಗಿ ಉತ್ತರದಿಕ್ಕಿಗೆ ತಿರುಗಿಕೊಂಡಿದ್ದು, ಎರಡು ಕಾಲುಗಳು ಹಾರುವ ಸ್ಥಿತಿಯಲ್ಲಿದೆ. ಹಾಗಾಗಿ ಈ ಆಂಜನೇಯನನ್ನು ಉತ್ತರಮುಖಿ ಆಂಜನೇಯ ಎಂದು ಕೂಡ ಗುರುತಿಸಲಾಗುತ್ತದೆ.
ಗರ್ಭಗುಡಿಯ ಮಂಟಪದಲ್ಲಿರುವ ಮೂರ್ತಿಯ ಒಳಗೆ ಪಿರಮಿಡ್ ಆಕಾರದಲ್ಲಿ ಸಾಧಾರಣ ಗಾತ್ರದ ಬಂಡೆಯಿದ್ದು ಬಂಡೆಯ ಬಳಿ ಪುಟ್ಟದಾದ ಮತ್ತೊಂದು ಆಂಜನೇಯನ ವಿಗ್ರಹವಿದೆ. ಈ ಉದ್ಭವ ಶಿಲೆಯ ಒಂದು ಮುಖದಲ್ಲಿ ಉತ್ತರಮುಖಿ ಆಂಜನೇಯನಿದ್ದರೆ, ಮತ್ತೊಂದು ಬದಿಯಲ್ಲಿ ಭೀಮಸೇನಾ ಅವತಾರದ ವಿಗ್ರಹದ ಛಾಯೆ ಕಾಣುವುದು ಮತ್ತೊಂದು ವಿಶೇಷವಾಗಿದೆ. ದೇವಾಲಯದೊಳಗೆ ರಾತ್ರಿ ವೇಳೆ ಸರ್ಪ ಸಂಚಾರವಿರುತ್ತದೆ ಎನ್ನುವ ನಂಬಿಕೆ ಹಾಗೂ ಎರಡು ಮೂರು ದಿನಗಳ ಕಾಲ ಪೂಜೆ, ಅರ್ಚನೆ ಮಾಡದಿದ್ದರೆ ನೆಲದಲ್ಲಿ ಹಾವು ಚೇಳುಗಳು ಕಾಣಿಸಿಕೊಳ್ಳುತ್ತವೆ ಎಂದು ಅರ್ಚಕ ರವೀಂದ್ರ ಭಟ್ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ದೇವಾಲಯಗಳ ಸಮುಚ್ಚಯ: ಶ್ರೀ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಸಾಕಷ್ಟು ದೇವಾಲಯಗಳನ್ನು ಕಾಣಬಹುದಾಗಿದೆ. ಆಂಜನೇಯಸ್ವಾಮಿ ದೇಗುಲದ ಪಕ್ಕದಲ್ಲಿ ಅರಳೀಮರ, ನಾಗಬನ, ನವಗ್ರಹ ಮೂರ್ತಿಗಳು, ನಂತರದಲ್ಲಿ ಶಿವಪಾರ್ವತಿ ಮತ್ತು ಗಣಪತಿ ದೇಗುಲ, ತದನಂತರ ಶ್ರೀ ಕೃಷ್ಣ ದೇವಾಲಯ, ಸುಬ್ರಮಣ್ಯೇಶ್ವರಸ್ವಾಮಿ ದೇಗುಲ, ಮಂಜುನಾಥಸ್ವಾಮಿ ದೇಗುಲ, ದಕ್ಷಿಣಾಮೂರ್ತಿ, ದಿವ್ಯ ದುರ್ಗೆ, ಗಣಪತಿ, ಚೌಡೇಶ್ವರಿ ದೇವಿ ಸೇರಿದಂತೆ ಇವೆಲ್ಲದರ ಮುಂಭಾಗದಲ್ಲಿರುವ ಸುಬ್ರಮಣ್ಯ ಹುತ್ತ ಮತ್ತು ಬೃಹದಾಕಾರದ ಸುಬ್ರಮಣ್ಯಸ್ವಾಮಿ ಮೂರ್ತಿ ನೋಡುಗರನ್ನು ಸೆಳೆಯುತ್ತದೆ.
ಭಕ್ತರ ನಂಬಿಕೆಗೆ ಒಲಿವ ಹನುಮ: 7 ಶತಮಾನಗಳ ಇತಿಹಾಸ ಹೊಂದಿರುವ ಆಂಜನೇಯಸ್ವಾಮಿ ದೇವಾಲಯದ ಅರ್ಚಕನಾಗಿ 3 ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ದಾನಿಗಳ ನೆರವಿನಿಂದ ದೇವಾಲಯ ಅಭಿವೃದ್ಧಿ ಹೊಂದುತ್ತಿದೆ. ಸತ್ಯ, ಧರ್ಮ ಮತ್ತು ಧೈರ್ಯದ ಪ್ರತೀಕ ನಮ್ಮ ಭಜರಂಗಿ. ಭಕ್ತರ ನಂಬಿಕೆಗೆ ಹನುಮ ಶರಣಾಗುತ್ತಾನೆ. ಪವಾಡದಂತಹ ಪ್ರಕರಣಗಳೂ ಕೂಡ ಇಲ್ಲಿ ನಡದಿದೆ. ಆಂಜನೇಯನ ಕರುಣೆ ಎಲ್ಲರ ಮೇಲಿರಲಿ.
ರವೀಂದ್ರಭಟ್ಅರ್ಚಕ
ಹನುಮನ ಆಶೀರ್ವಾದವೇ ನಮಗೆ ಶ್ರೀರಕ್ಷೆ: ಹುಣಸೂರಿನಲ್ಲಿ ಹನುಮ ಜಯಂತಿ ಉತ್ಸವವನ್ನು ಕಳೆದ 30 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ಮನಸಿಗೆ ಶಾಂತಿ, ನೆಮ್ಮದಿ ಮತ್ತು ಧೈರ್ಯವನ್ನು ತುಂಬಿ ಧರ್ಮದ ದಾರಿಯಲ್ಲಿ ನಡೆಯುವ ಸ್ಫೂರ್ತಿ ಆಂಜನೇಯನಿಂದ ನಮಗೆ ಸಿಕ್ಕಿದೆ. ಹನುಮಜಯಂತಿ ಉತ್ಸವಕ್ಕೆ ಮುನ್ನುಡಿಯಾಗಿ ಇಲ್ಲೇ ಪೂಜಾ ಕೈಂಕರ್ಯಗಳನ್ನು ಆರಂಭಿಸಿ ಉತ್ಸವವನ್ನು ಸಂಪನ್ನಗೊಳಿಸುವುದೂ ಈ ವಾಯುಪುತ್ರನ ಸನ್ನಿದಿಯಲ್ಲೇ ಆಗುತ್ತದೆ. ಆಂಜನೇಯ ನಮ್ಮೂರಿನ ರಕ್ಷಕನಾಗಿದ್ದಾನೆ.
ವಿ.ಎನ್.ದಾಸ್, ಅಧ್ಯಕ್ಷ, ತಾಲೂಕು ಹನುಮಂತೋತ್ಸವ ಸಮಿತಿ, ಹುಣಸೂರು