ನ್ಯೂಸ್

ಅಂಜನಾದ್ರಿಯಲ್ಲಿ ಅನುರಣಿಸಿದ ಹನುಮ ನಾಮ: ಲಕ್ಷಾಂತರ ಭಕ್ತರು ಭಾಗಿ, ಎಲ್ಲೆಲ್ಲೂ ಕೇಸರಿಮಯ

arunakunigal

ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಸೋಮವಾರ ಪವನ ನಾಮ ಅನುರಣಿಸಿತು. ಬೆಳಗಾವಿ, ಬೀದರ್​, ಕಲಬುರಗಿ, ಗದಗ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾನುವಾರವೇ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತರು ಸೋಮವಾರ ಬೆಳಗಿನ ಜಾವದಿಂದಲೇ ಮಾಲೆ ವಿಸರ್ಜಿಸಿದರು.

ಅಂಜನಾದ್ರಿ ಬೆಟ್ಟ ಸಂಪೂರ್ಣ ಕೇಸರಿಮಯವಾಗಿತ್ತು. ಗಂಗಾವತಿ ನಗರದಿಂದ ಅಂಜನಾದ್ರಿ ಬೆಟ್ಟ, ಹುಲಿಗಿವರೆಗೆ ಎತ್ತ ಕಣ್ಣಾಯಿಸಿದರೂ ಎಲ್ಲ ಗ್ರಾಮಗಳು ಕೇಸರಿಮಯವಾಗಿ ಕಂಗೊಳಿಸುತ್ತಿತ್ತು. ಇನ್ನು ಪುನೀತ್​ ಅಭಿಮಾನಿಗಳು ಅಪ್ಪು ಫೋಟೋ ಹಿಡಿದು ಬೆಟ್ಟ ಹತ್ತುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು. ಕೆಲವರು ಸ್ವಾತಂತ್ರ ಹೋರಾಟಗಾರ ಸಾವರ್ಕರ್​ರ ಫೋಟೋ ಹಿಡಿದು ಸಾಗಿದರು. ಲಕ್ಷಾಂತರ ಭಕ್ತರು ಜೈ ಶ್ರೀರಾಮ್​, ಹನುಮ ನಾಮ, ಹಿಂದುತ್ವ ಮಂತ್ರ ಪಠಿಸುತ್ತಲೇ ಸಾಗಿದರು. ಹನುಮ ನಾಮ ಸ್ಮರಣೆಯಲ್ಲಿ ಮಿಂದೆದ್ದರು.

ಇನ್ನು ಅಂಜನಾದ್ರಿ ಬೆಟ್ಟ ಹತ್ತಿ-ಇಳಿಯಲು ಭಕ್ತರಿಗೆ ಪ್ರತ್ಯೇಕ ಮಾರ್ಗ ಮಾಡಲಾಗಿತ್ತು. ಪ್ರಸಾದ, ಪಾರ್ಕಿಂಗ್​, ಕುಡಿವ ನೀರು, ಸ್ವಚ್ಛತೆ, ಮಾಹಿತಿ ಕೇಂದ್ರ, ಆರೋಗ್ಯ ಕೇಂದ್ರಗಳನ್ನು ತೆರೆದು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.