ನ್ಯೂಸ್

ಅನೀಷ್ ದಯಾಳ್ ಡೆಪ್ಯುಟಿ ಎನ್​ಎಸ್​ಎ

ಸುದೀಪ್​ ವಿ.ಎನ್​

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್​ಪಿಎಫ್) ಮಾಜಿ ಮಹಾ ನಿರ್ದೇಶಕ ಅನೀಷ್ ದಯಾಳ್ ಸಿಂಗ್​ರನ್ನು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಆಗಿ ಕೇಂದ್ರ ಸರ್ಕಾರ ಭಾನುವಾರ ನೇಮಿಸಿದೆ. 60 ವರ್ಷದ ಸಿಂಗ್, ಎನ್​ಎಸ್​ಎ ಅಜಿತ್ ದೋವಲ್​ರ ನೇರ ಸುಪರ್ದಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ದೋವಲ್​ರ ಪ್ರಮುಖ ತಂಡವನ್ನು ಬಲಪಡಿಸುವಲ್ಲಿ ಈ ನೇಮಕ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ. ಹೆಚ್ಚುವರಿ ಎನ್​ಎಸ್​ಎ ಆಗಿ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ (ಆರ್​ಎಡಬ್ಲ್ಯು) ಮಾಜಿ ಮುಖ್ಯಸ್ಥ ರಾಜಿಂದರ್ ಖನ್ನಾ ಮತ್ತು ಡೆಪ್ಯುಟಿ ಎನ್​ಎಸ್​ಎಗಳಾಗಿ ಟಿ.ವಿ. ರಾಮಚಂದ್ರನ್ ಹಾಗೂ ಪವನ್ ಕಪೂರ್​ರ ಸೇರ್ಪಡೆ ಸಹಿತ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯಕ್ಕೆ ಹಿರಿಯ ಅಧಿಕಾರಿಗಳನ್ನು ನೇಮಿಸಿದ ಬೆನ್ನಲ್ಲೇ ಈ ನೇಮಕವಾಗಿದೆ.

ಅನುಭವಿ ಅಧಿಕಾರಿ: 1988ರ ಐಪಿಎಸ್ ಬ್ಯಾಚ್​ನ ಮಣಿಪುರ ಕೇಡರ್​ನ ಸಿಂಗ್, 2024ರ ಜನವರಿ 1ರಿಂದ ಡಿಸೆಂಬರ್ 31ರ ವರೆಗೆ ಭರ್ತಿ ಒಂದು ವರ್ಷ ಕಾಲ ಸಿಆರ್​ಪಿಎಫ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಬೇಹುಗಾರಿಕೆ ದಳ (ಐಬಿ) ಮತ್ತು ಭಾರತ ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯಲ್ಲೂ ಸಿಂಗ್ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಎಡಪಂಥೀಯ ಉಗ್ರಗಾಮಿತ್ವ ಮತ್ತು ಈಶಾನ್ಯ ಭಾರತದ ಬಂಡುಕೋರರ ಸಹಿತ ಆಂತರಿಕ ಭದ್ರತಾ ವ್ಯವಹಾರಗಳ ವಿಚಾರಗಳನ್ನು ನೂತನ ಡೆಪ್ಯುಟಿ ಎನ್​ಎಸ್​ಎ ನೋಡಿಕೊಳ್ಳಲಿದ್ದಾರೆ.