ತೀರ್ಥಹಳ್ಳಿ: ಕೆನೆಲ್ ಕ್ಲಬ್‌ನ ರಜತ ಮಹೋತ್ಸವದ ಅಂಗವಾಗಿ ಪ್ರಾಣಿ ಕಲ್ಯಾಣ ಕಾರ್ಯಕ್ರಮ ಮತ್ತು ಶ್ವಾನಲೋಕದ ವಿಸ್ಮಯ ಪುಸ್ತಕ ಬಿಡುಗಡೆ ಸಮಾರಂಭವನ್ನು ಜ.26ರಂದು ಬೆಳಗ್ಗೆ 10 ಗಂಟೆಗೆ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಕಡಿದಾಳು ದಯಾನಂದ್ ಹೇಳಿದರು.
ಬೆಳಗ್ಗೆ 10ರಿಂದ 11.30ರವರೆಗೆ ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಕರುಣಾ ಪ್ರಾಣಿ ಸಂಘ ಮತ್ತು ದೇಸಿ ಶ್ವಾನ ತಳಿಗಳ ಸಂಘದ ಅಧ್ಯಕ್ಷ ಡಾ. ಡಿ.ಟಿ.ಜಯರಾಮಯ್ಯ, ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೆಶಕರಾದ ಡಾ. ಎ.ಎಂ.ಶಿವಕುಮಾರ್, ಡಾ. ವಿ.ಕೆ.ಮಂಜುನಾಥ್, ಪಶು ವೈದ್ಯಾಧಿಕಾರಿ ಮುರುಳೀಧರ್ ಕಿರಣಕೆರೆ ಹಾಗೂ ಡಾ. ಎನ್.ಕಾಂತರಾಜು ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮನುಷ್ಯನಿಗೆ ಅತ್ಯಂತ ಆಪ್ತವಾಗಿರುವ ಶ್ವಾನಗಳ ಕುರಿತಂತೆ ಹಿರಿಯ ಪ್ರಾಥಮಿಕ ವಿಭಾಗದಿಂದ ಮೇಲ್ಪಟ್ಟ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಬಾರಿ ಸ್ಥಳೀಯ ವಸತಿ ಶಾಲೆಗಳ ಕರೆತರಲು ವಾಹನಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಅದೇ ದಿನ ಸಂಜೆ 4ರಿಂದ ಕೋಣಂದೂರು ಮತ್ತು ಕುಡುಮಲ್ಲಿಗೆಯಲ್ಲಿ ಪ್ರತ್ಯೇಕವಾಗಿ ತಜ್ಞರ ತಂಡ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆಯೂ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶ್ವಾನಲೋಕದ ವಿಸ್ಮಯ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಕೆನೆಲ್ ಕ್ಲಬ್ ಅಧ್ಯಕ್ಷ ಕಾರ್ತಿಕ್ ಶರ್ಮ ವಹಿಸುವರು. ಬೆಂಗಳೂರಿನ ಲಿಯೋ ಚಾರಿಟಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಶ್ರುತಿ ರತ್ನಾಕರ್ ಪುಸ್ತಕ ಬಿಡುಗಡೆ ಮಾಡುವರು. ಬೆಂಗಳೂರಿನ ಡಾ. ಲಕ್ಷ್ಮೀನಾರಾಯಣ ಸ್ವಾಮಿ, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ನಿವೃತ್ತ ಪ್ರಾಚಾರ್ಯ ಡಾ. ಗಣಪತಿ ಉತ್ತುಂಗ, ಉಮಾ ಕೆ. ಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಈ ಪುಸ್ತಕ ದೇಶೀಯ ಶ್ವಾನ ತಳಿಗಳೂ ಸೇರಿ ವಿಶ್ವಮಟ್ಟದ 44 ತಳಿಗಳ ವಿವರಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಕ್ಲಬ್‌ನಿಂದ ಈವರೆಗೆ ಪ್ರತಿ ಎರಡು ವರ್ಷಗಳಿಗೆ ಒಂದರಂತೆ ತಾಲೂಕು ಮತ್ತು ರಾಜ್ಯಮಟ್ಟದ 13 ಶ್ವಾನ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಲ್ಲಿ ತೀರ್ಥಹಳ್ಳಿ, ಬಸವಾನಿ ಹಾಗೂ ಉಂಟೂರುಕಟ್ಟೆ ಕೈಮರಗಳಲ್ಲಿ ಕೂಡ ಶ್ವಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಕ್ಲಬ್ ಆರಂಭಗೊಂಡ ನಂತರದಲ್ಲಿ ತಾಲೂಕಿನಲ್ಲಿ ಶ್ವಾನಗಳ ಬಗ್ಗೆ ವಿಶೇಷ ಆಸಕ್ತಿ ಮೂಡಿರುವುದು ಗಮನಾರ್ಹ ಸಂಗತಿ ಎಂದರು.
ಕ್ಲಬ್ ಅಧ್ಯಕ್ಷ ಕಾರ್ತಿಕ್ ಶರ್ಮ, ಬಿ.ಕೆ.ಹರ್ಷ, ಡಾ. ವಿ.ಕೆ.ಮಂಜುನಾಥ್, ಡಾ. ಅರುಣ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.