ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ಅನಿಮಲ್' ಇದೀಗ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿದೆ. ಉತ್ತಮ ಗಳಿಕೆ ಕಂಡಿದ್ದೇ ಆದ್ರೂ ಉತ್ತಮ ಪ್ರತಿಕ್ರಿಯೆ ಚಿತ್ರಕ್ಕೆ ಲಭಿಸುತ್ತಿಲ್ಲ ಎಂಬುದು ಗಮನಾರ್ಹ! ರಿಲೀಸ್ ಆದ ಮೊದಲ ದಿನದಿಂದಲೂ ಸಿನಿಮಾ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಸದ್ಯ 'ಅನಿಮಲ್' ಈ ವರ್ಷದ ಅತಿ ದೊಡ್ಡ ಹಿಟ್‌ಗಳಲ್ಲಿ ಒಂದಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯ ಮೂಲಕ ಸಾಗುತ್ತಿದೆ. ಆ್ಯಕ್ಷನ್-ಡ್ರಾಮಾ ಜಾನರ್ ಒಳಗೊಂಡ ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದು, ಟಿ-ಸೀರಿಸ್ ನಿರ್ಮಾಣ ಮಾಡಿದೆ.
'ಅನಿಮಲ್' ಸಿನಿಮಾವನ್ನು ನೋಡಿದ ಪ್ರೇಕ್ಷಕರಿಗೆ ಕಡೆಯಲ್ಲಿ ಇದರ ಮುಂದಿನ ಭಾಗವಿದೆ ಎಂಬುದರ ಸುಳಿವು ಸಿಕ್ಕಿದ್ದು, ಅನಿಮಲ್ 2 ಶೀಘ್ರವೇ ಹೊರಬರಲಿದೆ ಎಂಬ ಲೆಕ್ಕಾಚಾರಗಳನ್ನು ಹಾಕಿದ್ದಾರೆ. ಚಿತ್ರತಂಡ ಕೂಡ ಸಿನಿಮಾದ ಅಂತ್ಯದಲ್ಲಿ ಈ ಊಹೆಗಳು ನಿಜ ಎಂಬುದನ್ನು ಖಚಿತಪಡಿಸಿದೆ. ಭಾಗ 2 'ಅನಿಮಲ್ ಪಾರ್ಕ್' ಎಂಬ ಶೀರ್ಷಿಕೆಯಡಿ ತೆರೆ ಮೇಲೆ ಮೂಡಿಬರಲಿದೆ ಎಂದು ಹೇಳಲಾಗಿದೆ.
ಪಾರ್ಟ್ 2 'ಅನಿಮಲ್ ಪಾರ್ಕ್' ಬಗ್ಗೆ ಮಾತನಾಡಿದ ನಿರ್ದೇಶಕ ಸಂದೀಪ್, "ಇದು ಚಾಲ್ತಿಯಲ್ಲಿದೆ. ಆದ್ರೆ, ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ನಟ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಜತೆಗಿನ ಸಿನಿಮಾಗಳನ್ನು ಮುಗಿಸಿದ ಬಳಿಕ 2026ರಲ್ಲಿ ಭಾಗ 2ರ ಚಿತ್ರವು ರೂಪುಗೊಳ್ಳಲಿದೆ" ಎಂದು ದೃಢಪಡಿಸಿದ್ದಾರೆ. ಡಿ. 01 ರಂದು ಬಿಡುಗಡೆಗೊಂಡ ಅನಿಮಲ್ ಮೊದಲನೇ ವಾರಾಂತ್ಯಕ್ಕೆ ಬಾಕ್ಸ್ ಆಫೀಸ್‌ನಲ್ಲಿ 527 ಕೋಟಿ ರೂ. ಗಳಿಕೆ ಕಾಣುವ ಮುಖೇನ ಇದೀಗ ತನ್ನ ಓಟವನ್ನು ಮುಂದುವರೆಸಿದೆ,(ಏಜೆನ್ಸೀಸ್).