ನವೀನ್ ಬಿಲ್ಗುಣಿ ಶಿವಮೊಗ್ಗ
ಸರ್ಕಾರ ನೀಡುತ್ತಿದ್ದ ಹಾಲಿನ ಸಹಾಯಧನಕ್ಕೆ ಕೊಕ್ಕೆ ಹಾಕಿದ್ದಲ್ಲದೆ ಹಾಲಿನ ದರ ಕೂಡ ಇಳಿಕೆ ಮಾಡಿದ್ದ ಕೆಎಂಎಫ್(ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ)ವು ಇದೀಗ ಪಶು ಆಹಾರ ದರವನ್ನೂ ಪ್ರತಿ ಮೆಟ್ರಿಕ್ ಟನ್‌ಗೆ 500 ರೂ. ಹೆಚ್ಚಿಸಿ ಹೈನುಗಾರಿಕೆಗೆ ಮತ್ತಷ್ಟು ಹೊರೆ ಆಗುವಂತೆ ಮಾಡಿದೆ.
ಪಶು ಆಹಾರ ಉತ್ಪಾದನೆಗೆ ಬೇಕಾಗುವ ಕಚ್ಚಾ ಪದಾರ್ಥಗಳ ಬೆಲೆ ಏರಿಕೆ ನೆಪದಲ್ಲಿ ಇದೀಗ ಫೆ.20ರಿಂದ ಅನ್ವಯವಾಗುವಂತೆ ಪ್ರತಿ ಮೆಟ್ರಿಕ್ ಟನ್‌ಗೆ 500 ರೂ. ಹೆಚ್ಚಿಸಿ ನಂದಿನಿ ಪಶು ಆಹಾರ ಮಾರಾಟ ದರವನ್ನು ಪರಿಷ್ಕರಿಸಿದ್ದು ಹೈನುಗಾರರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬರಗಾಲ ತಾಂಡವವಾಡುತ್ತಿದೆ. 235 ತಾಲೂಕುಗಳನ್ನು ಬರಪೀಡಿತವೆಂದು ಸರ್ಕಾರವೇ ಘೋಷಣೆ ಮಾಡಿದೆ. ಬೆಳೆ ನಷ್ಟದಿಂದ ಕಂಗಾಲಾಗಿದ್ದ ರೈತರು ಹೈನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದರು. ಮೊದಲು ಸರ್ಕಾರದಿಂದ ಬರುತ್ತಿದ್ದ 5 ರೂ. ಸಹಾಯಧನ ಸ್ಥಗಿತಗೊಳಿಸಲಾಯಿತು. ಅದರ ಬೆನ್ನಲ್ಲೇ ಪ್ರತಿ ಲೀಟರ್‌ಗೆ 2 ರೂ. ಕಡಿತಗೊಳಿಸಲಾಯಿತು. ಅದು ಸಾಲದು ಎಂಬಂತೆ ಇದೀಗ ಪಶು ಆಹಾರದ ಮೇಲಿನ ದರವನ್ನೂ ಹೆಚ್ಚಳ ಮಾಡಿ ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಲಾಗಿದೆ.
ರೈತರಿಗೆ ಬರೆ: ಕರ್ನಾಟಕ ಹಾಲು ಮಹಾಮಂಡಳಿಯು ಇಡೀ ದಕ್ಷಿಣ ಭಾರತದಲ್ಲಿನ ಸಹಕಾರ ಹಾಲು ಮಹಾಮಂಡಳಿಗಳಲ್ಲಿ ಅಗ್ರಸ್ಥಾನದಲ್ಲಿದೆ. ರಾಜ್ಯದ 16 ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಡಿಯಲ್ಲಿ, ಗ್ರಾಮೀಣ ಮಟ್ಟದಲ್ಲಿ ಕಾರ್ಯಾಚರಣೆಯಲ್ಲಿರುವ 15,453ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 26.44 ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ. ಹೈನು ಅಭಿವೃದ್ಧಿಯ ಮೂಲಕ ಗ್ರಾಮೀಣ ಪ್ರದೇಶದ ಶ್ರೇಯೋಭಿವೃದ್ಧಿಯೇ ಮಹಾಮಂಡಳಿಯ ಧ್ಯೇಯೋದ್ದೇಶ. ಆದರೆ ಇದೀಗ ಬರದಿಂದ ತತ್ತರಿಸಿರುವ ಹೈನುಗಾರರಿಗೆ ಮಹಾಮಂಡಳಿಯು ಗಾಯದ ಮೇಲೆ ಬರೆ ಎಳೆದಿದೆ.
ವರ್ಷದಲ್ಲಿ ಕ್ವಿಂಟಾಲ್‌ಗೆ 500 ರೂ. ಏರಿಕೆ
ಕಳೆದ ವರ್ಷ ನಂದಿನಿ ಪಶು ಆಹಾರ ದರ ಪ್ರತಿ 50 ಕೆಜಿಗೆ 1,100 ರೂ. ಇತ್ತು. ಹಲವು ಬಾರಿ ಏರಿಕೆ ಕಂಡು 2023ರ ಅಂತ್ಯಕ್ಕೆ 1,231 ಇತ್ತು. ಸಂಘದ ಮತ್ತು ಕಾರ್ಯದರ್ಶಿ ಪ್ರೋತ್ಸಾಹ ಧನ 10 ರೂ. ಸೇರಿ 1,250 ರೂ. ಪಡೆಯುತ್ತಿದ್ದರು. ಇದೀಗ 1,256 ರೂ.ಗೆ ತಲುಪಿದ್ದು ಸಂಘದ ಮತ್ತು ಕಾರ್ಯದರ್ಶಿ ಪ್ರೋತ್ಸಾಹ ಧನ 1,266 ರೂ.ಗೆ ಮಾರಾಟ ಮಾಡುವಂತೆ ಹಾಲು ಮಾರಾಟ ಸಂಘಗಳಿಗೆ ಸೂಚಿಸಲಾಗಿದೆ. ಇದರಿಂದ ಒಂದೇ ವರ್ಷದಲ್ಲಿ ಪ್ರತಿ ಕ್ವಿಂಟಾಲ್‌ಗೆ ನಂದಿ ಪಶು ಆಹಾರ ದರ 250 ರೂ. ಹೆಚ್ಚಳವಾಗಿದೆ. ಗೋದಿ ಬೂಸಾ ಕೂಡ 50 ಕೆಜಿ ಚೀಲಕ್ಕೆ 1,500 ರೂ. ತಲುಪಿದ್ದು 100ರಿಂದ 150 ರೂ. ಹೆಚ್ಚಳವಾಗಿದೆ.
ಕೈಗೆಟುಕದ ಹತ್ತಿಕಾಳು ಹಿಂಡಿ
ನಂದಿನಿ ಪಶು ಆಹಾರ ಹೊರತುಪಡಿಸಿ ಪಶುಗಳಿಗೆ ಅಂಗಡಿಗಳಲ್ಲಿ ಹತ್ತಿಕಾಳು ಹಿಂಡಿ ಮಾರಾಟ ಮಾಡಲಾಗುತ್ತಿದ್ದು ಅದೂ ದುಬಾರಿಯಾಗಿದೆ. ಪ್ರತಿ 50 ಕೆಜಿ ಚೀಲಕ್ಕೆ 1,700 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಅದು ಮತ್ತಷ್ಟು ಏರಿಕೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಂದಿನಿ ಪಶು ಆಹಾರ ಬೈಪಾಸ್ ಬೆಲೆ ಕೂಡ 50 ಕೆಜಿ ಚೀಲಕ್ಕೆ 1,352ರಿಂದ 1,378 ರೂ.ಗೆ ಏರಿಕೆಯಾಗಿದೆ. ಜತೆಗೆ ಸಂಘದ ಮತ್ತು ಕಾರ್ಯದರ್ಶಿ ಪ್ರೋತ್ಸಾಹ ಧನ 10 ರೂ. ಕೂಡ ರೈತರು ನೀಡುವುದು ಅನಿವಾರ್ಯವಾಗಿದೆ.
ಚಿಂತೆಗೆ ದೂಡಿದ ಬಿಸಿಲಿನ ತಾಪ
ಬೇಸಿಗೆ ಆರಂಭಗೊಂಡಿದ್ದು ಜನರ ಜತೆಗೆ ಜಾನುವಾರುಗಳೂ ಹೈರಾಣಾಗುತ್ತಿವೆ. ಬಿಸಿಲ ತಾಪದಿಂದ ಹಾಲು ಆವಕ ಕೂಡ ಕಡಿಮೆ ಆಗಿದೆ. ಇದರ ನಡುವೆ ಹಾಲಿನ ಡಿಗ್ರಿ(ಗುಣಮಟ್ಟ) ಹಾಗೂ ಫ್ಯಾಟ್(ಕೊಬ್ಬಿನಾಂಶ) ಬರುತ್ತಿಲ್ಲ ಎಂಬುದು ಹೈನುಗಾರರನ್ನು ಚಿಂತೆಗೆ ದೂಡಿದೆ. ಡಿಗ್ರಿ ಅಥವಾ ಫ್ಯಾಟ್ ಬಾರದಿದ್ದರೆ ಹಾಲನ್ನು ವಾಪಸ್ ಕಳಿಸಲಾಗುತ್ತದೆ. ಸಾಮಾನ್ಯವಾಗಿ ಡಿಗ್ರಿ 29ರಷ್ಟು ಹಾಗೂ ಫ್ಯಾಟ್ 3.8ರಷ್ಟಿದ್ದರೆ ಮಾತ್ರ ಹಾಲು ಉತ್ಪಾದಕ ಸಂಘ ಹಾಗೂ ಬಲ್ಕ್ ಮಿಲ್ಕ್ ಕೂಲರ್ (ಬಿಎಂಸಿ)ಗಳಲ್ಲಿ ಹಾಲು ತುಂಬಿಸಿಕೊಳ್ಳುತ್ತಾರೆ. ಡಿಗ್ರಿ 22ರಿಂದ 25ರವರೆಗೆ ಹಾಗೂ ಫ್ಯಾಟ್ 2.5ದಿಂದ 3.0ವರೆಗೆ ಬರುತ್ತದೆ. ಇನ್ನೂ ಕೆಲವೊಮ್ಮೆ ಡಿಗ್ರಿ ಬಂದರೆ ಫ್ಯಾಟ್ ಬರಲ್ಲ. ಮತ್ತೆ ಕೆಲವೊಮ್ಮೆ ಫ್ಯಾಟ್ ಬಂದರೆ ಡಿಗ್ರಿ ಬರಲ್ಲ ಎನ್ನುತ್ತಾರೆ ಹಾಲು ಉತ್ಪಾದಕರು.
ಬರದ ನಡುವೆ ಹೈನುಗಾರಿಕೆ ಮಾಡುವುದೇ ಕಷ್ಟಕರವಾಗಿದೆ. ಹಾಲು ಮಾರಾಟದಿಂದ ರೈತರಿಗೆ ಆದಾಯ ಉಳಿಯುತ್ತಿಲ್ಲ. 5 ರೂ. ಸಹಾಯಧನ, ದರ ಇಳಿಕೆ ನಡುವೆ ಇದೀಗ ಕೆಎಂಎಫ್ ನಂದಿನಿ ಪಶು ಆಹಾರ ದರವನ್ನು ಹೆಚ್ಚಳ ಮಾಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.ದಿನೇಶ್, ಹೈನುಗಾರ