ನ್ಯೂಸ್

VIDEO| ಅಣ್ಣನಿಗೆ ರಾಖಿ ಕಟ್ಟಲು ತವರು ಮನೆಗೆ ಹೋಗುತ್ತೇನೆಂದ ಪತ್ನಿ ಮೂಗು ಕತ್ತರಿಸಿದ ಪತಿ

ಕಲ್ಕತ್ತಾ: ಸಹೋದರ-ಸಹೋದರಿ ಸಂಬಂಧವನ್ನು ಬೆಸೆಯುವ ಬಾಂಧವ್ಯದ ಹಬ್ಬ ರಕ್ಷಾ ಬಂಧನ. ಸಹೋದರ ಮತ್ತು ಸಹೋದರಿ ನಡುವಿನ ಪ್ರೀತಿ ಹಾಗೂ ನೆನಪುಗಳು ಅಚ್ಚಳಿಯದೆ ಉಳಿಯಲು ಪ್ರತಿ ವರ್ಷ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ರಕ್ಷಾಬಂಧನ ಪ್ರಯುಕ್ತ ತನ್ನ ಹೆಂಡತಿ ತವರು ಮನೆಗೆ ಹೋಗಿ ಬರುವುದಾಗಿ ಹೇಳಿದ್ದಕ್ಕೆ ಕುಪಿತಗೊಂಡು ಆಕೆಯ ಮೂಗನ್ನೇ ಕತ್ತರಿಸಿರುವ ಘಟನೆ ಉತ್ತರಪ್ರದೇಶದ ಹರ್ದೋಯ್​ನಲ್ಲಿ ನಡೆದಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಆರೀಪಿಯನ್ನು ರಾಹುಲ್​ ಎಂದು ಗುರುತಿಸಲಾಗಿದ್ದು, ಮಹಿಳೆಯ ಹೆಸರು ಅನಿತಾ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಗಾಯಾಳು ಅನಿತಾ, ಅಣ್ಣನಿಗೆ ರಾಖಿ ಕಟ್ಟಿ ಬರಲು ತವರಿಗೆ ಹೋಗುತ್ತೀನಿ ಎಂದು ಹೇಳಿದ್ದಕ್ಕೆ ನನ್ನ ಪತಿ ಮೂಗನ್ನು ಕತ್ತರಿಸಿದ್ದಾನೆ. ಆತನ ಜೊತೆ ನನಗೆ ಬದುಕಲು ಇಷ್ಟವಿಲ್ಲ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮಹಿಳೆ ವೈರಲ್​ ಆಗಿರುವ ವಿಡಿಯೋದಲ್ಲಿ ಹೇಳುತ್ತಿರುವುದನ್ನು ನೋಡಬಹುದಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬನಿಯಾನಿ ಪೂರ್ವದ ನಿವಾಸಿ ರಾಹುಲ್ ಎಂದು ಗುರುತಿಸಲಾದ ವ್ಯಕ್ತಿ ತನ್ನ ಪತ್ನಿ ಅನಿತಾ ರಕ್ಷಾ ಬಂಧನದ ಸಂದರ್ಭದಲ್ಲಿ ಬೆಹಟಗೋಕುದಲ್ಲಿರುವ ತನ್ನ ತಾಯಿಯ ಮನೆಗೆ ಹೋಗುವಂತೆ ಕೇಳಿಕೊಂಡ ನಂತರ ಜಗಳವಾಡಿದ್ದಾನೆ. ಈ ವಿಷಯ ವಿಕೋಪಕ್ಕೆ ಹೋಗಿದ್ದು, ಕೋಪಗೊಂಡ ಆತ ತನ್ನ ಪತ್ನಿಯ ಮೂಗನ್ನೇ ಕತ್ತರಿಸಿದ್ದಾನೆ. ಮಹಿಳೆಯ ಕಿರುಚಾಟವನ್ನು ಕೇಳಿದ ಆಕೆಯ ಅತ್ತೆಯೂ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಒಇ ತಲೆಮಾರಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.