ಶಿವಮೊಗ್ಗ: ಹೆಚ್ಚುವರಿ ಪಿಂಚಣಿಗಾಗಿ ಹೋರಾಟ ನಡೆಸುತ್ತಿದ್ದ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಅಶೋಕ್ ರಾವತ್ ಅವರನ್ನು ದೆಹಲಿ ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ ಕೆಎಸ್‌ಆರ್‌ಟಿಸಿ ನೌಕರರು ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಅಶೋಕ್ ರಾವತ್ ಹೆಚ್ಚುವರಿ ಪಿಂಚಣಿಗಾಗಿ ರಾಷ್ಟ್ರಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನ ಮಂತ್ರಿಗಳನ್ನೂ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆ.4ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ದೆಹಲಿಯ ಪೊಲೀಸರು ಅವರನ್ನು ಅಮಾನವೀಯವಾಗಿ ನಡೆಸಿಕೊಂಡಿರುವುದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಪ್ರಸ್ತುತ ಒಂದು ಸಾವಿರ ರೂ.ನಿಂದ ಮೂರು ಸಾವಿರ ರೂ.ವರೆಗೆ ಮಾಸಿಕ ಪಿಂಚಣಿ ಪಡೆಯುತ್ತಿದ್ದೇವೆ. ಇಪಿಎಫ್-95 ಕಾಯ್ದೆಯಡಿ ನಮಗೆ ಪಿಂಚಣಿಗೆ ಹೆಚ್ಚಿಸಬೇಕೆಂಬುದು ಬಹುವರ್ಷದ ಬೇಡಿಕೆಯಾಗಿದೆ. ಇದಕ್ಕೆ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಎಂ.ದೇವರಾಜ್, ಅಧ್ಯಕ್ಷ ಕೆ.ಆರ್.ನಾಗರಾಜ್, ಕಾರ್ಯದರ್ಶಿ ಎಸ್.ಜಿ.ವಿಶ್ವನಾಥ್, ಸಹ ಕಾರ್ಯದರ್ಶಿ ಕೆ.ಬಸವರಾಜಪ್ಪ, ಖಜಾಂಚಿ ಜಿ.ಮಂಜುನಾಥ್, ನಿರ್ದೇಶಕ ಎಂವಿಆರ್ ಜೋಯ್ಸ ಇತರರಿದ್ದರು.