ಶಿವಮೊಗ್ಗ:ಮಗುವಿಗೆ ತಾಯಿ ಜನ್ಮ ನೀಡಿದರೆ, ಕಾಯಿಲೆ ಬಂದಾಗ ಮರುಜನ್ಮ ನೀಡುವವರು ವೈದ್ಯರು. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಕಾಯಿಲೆ ಬಾರದಂತೆ ನೋಡಿಕೊಳ್ಳುತ್ತಾರೆ. ಇವರ ಸೇವೆ ವೈದ್ಯರ ಸೇವೆಗಿಂತಲೂ ಮಿಗಿಲು ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ ಏರ್ಪಡಿಸಿದ್ದ ಮಕ್ಕಳ ಆರೋಗ್ಯ, ದೈಹಿಕ, ಮಾನಸಿಕ ಬೆಳವಣಿಗೆ, ಪಾಲನೆ-ಪೋಷಣೆ ಹಾಗೂ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ ಕುರಿತ ವರ್ಚುವಲ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ಹಾಗೂ ಜನರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಕಣ್ಣು ಹಾಗೂ ಕಿವಿಯಂತೆ ಇವರು ಕಾರ್ಯ ನಿರ್ವಹಿಸುತ್ತಾರೆ ಎಂದರು.
ದೇಶದಲ್ಲಿ ವರ್ಷವೊಂದರಲ್ಲಿ ಸಾವಿಗೀಡಾಗುವ ಮಕ್ಕಳ ಪೈಕಿ ಶೇ.69ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಮರಣ ಹೊಂದುತ್ತಿದ್ದಾರೆ. ಮಕ್ಕಳ ಅಪೌಷ್ಟಿಕತೆ ದೂರ ಮಾಡುವ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಎಚ್.ಕೃಷ್ಣಪ್ಪ, ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್‌ಕುಮಾರ್, ಜಿಪಂ ಉಪಕಾರ್ಯದರ್ಶಿ (ಆಡಳಿತ) ಸುಜಾತಾ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜ್, ಆಯುಷ್ ಇಲಾಖೆ ಅಧಿಕಾರಿ ಜ್ಯೋತಿಲಕ್ಷ್ಮೀ ಇತರರಿದ್ದರು.
ಜಿಲ್ಲೆಯ ವಿವಿಧ 44 ಕೇಂದ್ರಗಳಲ್ಲಿ 2,400 ಅಂಗನವಾಡಿ ಕಾರ್ಯಕರ್ತೆಯರು, 80 ಮೇಲ್ವಿಚಾರಕಿಯರು ವರ್ಚುವಲ್ ಮೂಲಕ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.