ಶಿವಮೊಗ್ಗದ ಡಿಎಆರ್ ಸಭಾಭವನದಲ್ಲಿ ಜಿಲ್ಲಾಮಟ್ಟದ ಪೋಷಣ್ ಮಾಸಾಚರಣೆ ಮತ್ತು ಬೇಟಿ ಬಚಾವೋ ಬೇಟಿ ಪಡಾವೋ ಕುರಿತು ಅರಿವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಉದ್ಘಾಟಿಸಿದರು. ಡಾ. ಓ.ಮಲ್ಲಪ್ಪ, ಭಾರತಿ ಆರ್. ಬಣಕಾರ್, ಆರ್.ಮಂಜುನಾಥ್, ಡಾ.ಚಂದ್ರಶೇಖರ್, ಶಶಿರೇಖಾ, ಸಿ.ಗಂಗಾಬಾಯಿ ಇದ್ದರು. 
ನ್ಯೂಸ್

ಅಂಗನವಾಡಿ ಕಾರ್ಯಕರ್ತೆಯರು ತಾಯಿ ಸ್ವರೂಪಿಗಳು

ಶಿವಮೊಗ್ಗ: ಅಂಗನವಾಡಿ ಕಾರ್ಯಕರ್ತೆಯರು ತಾಯಿ ಸ್ವರೂಪಿಗಳಾಗಿದ್ದು, ಮಗುವಿನ ಪಾಲನೆ ಮತ್ತು ಪೋಷಣೆ ಮಾಡುವ ಮೂಲಕ ಮಾತೃ ವಾತ್ಸಲ್ಯ ನೀಡುತ್ತಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಅಭಿಪ್ರಾಯಪಟ್ಟರು.

ನಗರದ ಡಿಎಆರ್ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪೋಷಣ್ ಮಾಸಾಚರಣೆ ಮತ್ತು ಬೇಟಿ ಬಚಾವೋ ಬೇಟಿ ಪಡಾವೋ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ನೆಲೆಸಲು ಅಂಗನವಾಡಿ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಜಿಲ್ಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮತ್ತಷ್ಟು ಕೆಲಸ ಮಾಡಬೇಕಿದೆ ಎಂದರು.

ಮಗುವಿಗೆ ಶೋಷಣೆ ಆಗಬಾರದು. ಪಾಲನೆಯಲ್ಲಿ ಯಾವುದೇ ಕೊರತೆ ಉಂಟಾಗಬಾರದು ಎಂಬುದು ಪೋಷಣ್ ಮಾಸಾಚರಣೆ ಉದ್ದೇಶ. ಅಂಗನವಾಡಿ ಕಾರ್ಯಕರ್ತೆಯರು ಪ್ರತಿದಿನವೂ ಪೌಷ್ಟಿಕ ಆಹಾರ ನೀಡುವ ಮೂಲಕ ಮಗುವಿನ ಲಾಲನೆ, ಪಾಲನೆ ಮಾಡುತ್ತಿದ್ದಾರೆ. ಜತೆಗೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಪೋಕ್ಸೋ ಪ್ರಕರಣ ತಡೆಗಟ್ಟುವಲ್ಲಿ, ಆ ಬಗ್ಗೆ ಜಾಗೃತಿ ಮೂಡಿಸಲು ಕೂಡ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಬಾಲ ನ್ಯಾಯಮಂಡಳಿ ಸದಸ್ಯೆ, ಮನೋರೋಗ ತಜ್ಞೆ ಡಾ. ಕೆ.ಎಸ್.ಪವಿತ್ರಾ ಉಪನ್ಯಾಸ ನೀಡಿದರು. ಟಿಎಚ್‌ಒ ಡಾ.ಚಂದ್ರಶೇಖರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಗಂಗಾಬಾಯಿ ಮತ್ತಿತರರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆಯರು ಜೀವ ರಕ್ಷಕರು

ಪೋಷಣ್ ಮಾಸಾಚರಣೆ ಮತ್ತು ಬೇಟಿ ಬಚಾವೋ ಬೇಟಿ ಪಡಾವೋ ಸರ್ಕಾರದ ಮಹಾತ್ವಕಾಂಕ್ಷೆಯ ಕಾರ್ಯಕ್ರಮ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದರ ಬೆನ್ನೆಲುಬು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಓ.ಮಲ್ಲಪ್ಪ ಹೇಳಿದರು. ಕರೊನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡಿರುವ ಇವರು ಆರೋಗ್ಯದ ಹೋರಾಟಗಾರರು, ಜೀವ ರಕ್ಷಕರು ಹಾಗೂ ಪ್ರತಿ ಸಮುದಾಯಗಳ ಆಶಾಕಿರಣರಾಗಿದ್ದಾರೆ ಎಂದರು.

ತಾಯಿ ಹಾಗೂ ಮಕ್ಕಳ ಮರಣವನ್ನು ತಡೆಗಟ್ಟುವಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಕೆಲಸ ಮಾಡಬೇಕು. ರಾಜ್ಯದಲ್ಲಿ ಶೇ.47ರಷ್ಟು ತಾಯಂದಿರು ಹಾಗೂ ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದು, ಗರ್ಭಿಣಿಯರ ದೇಹದಲ್ಲಿ ಎಚ್‌ಬಿ ಮಟ್ಟ 11ಕ್ಕಿಂತ ಹೆಚ್ಚು ಹೊಂದಿರಬೇಕು. ರಾಜ್ಯದಲ್ಲಿ ಶೇ.98ರಷ್ಟು ಮಕ್ಕಳಿಗೆ ಜನಿಸಿದ 1ಗಂಟೆವರೆಗೂ ಎದೆ ಹಾಲು ಸಿಗುತ್ತಿದೆ. ಇದು ಶೇ.100ರಷ್ಟು ಆಗಬೇಕು. ಆ ನಿಟ್ಟಿನಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಶ್ರಮ ವಹಿಸಬೇಕು ಎಂದರು.