ನ್ಯೂಸ್

ಅಂಗನವಾಡಿ ಹಾಲಿನಪುಡಿ ಸರಬರಾಜಿನಲ್ಲಿ ಅವ್ಯವಹಾರ ಆರೋಪ

ಹಾವೇರಿ: ಹಾನಗಲ್ಲ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಬೇಕಿದ್ದ ಹಾಲಿನಪುಡಿ ಹಾಗೂ ಇನ್ನಿತರ ಸಾಮಗ್ರಿಗಳ ಸರಬರಾಜಿನಲ್ಲಿ ಬೃಹತ್​ ಅವ್ಯವಹಾರ ನಡೆದಿದ್ದು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರ ಮಂಜುನಾಥ ಕರ್ಜಗಿ ಒತ್ತಾಯಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ಪುಡಿ ಪೂರೈಕೆ ಕುರಿತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾಹಿತಿ ಹಕ್ಕಿನಡಿ ಪಡೆದ ಎಲ್ಲ ದಾಖಲೆಗಳಲ್ಲಿ ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಅಲ್ಲದೆ ಇಲಾಖೆಯ ಆಂತರಿಕ ತನಿಖೆಯಲ್ಲಿ ಹಾನಗಲ್ಲ ತಾಲೂಕ ಸಿಡಿಪಿಒ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ, ಎಂಎಸ್​ಪಿಸಿಯವರು ಈ ಹಾಲಿನಪುಡಿ ಸರಬರಾಜಿನಲ್ಲಿ ಅಕ್ರಮ ಎಸಗಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ.

ಹಾನಗಲ್ಲ ತಾಲೂಕಿಗೆ ಎರಡು ಲೋಡ್​ಗಳಷ್ಟು ಹಾಲಿನಪುಡಿ ಸರಬರಾಜು ಆಗಿದ್ದರೆ, ಕೇವಲ ಒಂದು ಲೋಡ್​ ಮಾತ್ರ ಹಂಚಿಕೆಯಾಗಿದೆ. ಈ ಕುರಿತು ತಾಲೂಕಿನ ವಿವಿಧ ಅಂಗನವಾಡಿಗಳಲ್ಲಿ ಮಾಹಿತಿ ಪಡೆದಾಗ ಕಳೆದ ಕೆಲವು ತಿಂಗಳಿಂದ ಹಾಲಿನಪುಡಿ ಸರಬರಾಜು ಆಗಿಲ್ಲ ಎಂದೂ ಮತ್ತೆ ಕೆಲವೆಡೆ ಅನುದಾನ ಇಲ್ಲ ಎಂಬ ಉತ್ತರ ಕೇಳಿ ಬಂದಿದೆ ಎಂದು ದೂರಿದರು.

ಹಾಲಿನಪುಡಿ ಪೂರೈಕೆ ಅಕ್ರಮದ ಕುರಿತು ಶಾಸಕರು ಸಂಬಂಧಿಸಿದ ಸಿಡಿಪಿಒ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಅಕ್ರಮದ ವಿಚಾರಣೆ ನಡೆಯುತ್ತಿಲ್ಲ. ಈ ಬಗ್ಗೆ ಎಂಎಸ್​ಪಿಸಿಯವರು ಹಾಲಿನ ಪುಡಿ ಸರಬರಾಜು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ತಾಲೂಕಿನ ಅಂಗನವಾಡಿ ಮಕ್ಕಳಿಗೆ ಸಿಗಬೇಕಾದ ಹಾಲಿನ ಪುಡಿಯನ್ನು ಸಿಡಿಪಿಓ ಮತ್ತು ಇತರರು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಇದರಲ್ಲಿ ಬೃಹತ್​ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ತುರ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಅಲ್ಲದೆ ಈ ಕುರಿತು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಉಪಲೋಕಾಯುಕ್ತರಿಗೂ ದೂರು ಸಲ್ಲಿಸಲಾಗಿದೆ. ಈ ಭ್ರಷ್ಟಾಚಾರದಲ್ಲಿ ಕೆಎಂಎಫ್​ ಅಧಿಕಾರಿ, ಸಿಬ್ಬಂದಿ, ಹಾನಗಲ್ಲ ತಾಲೂಕಿನ ಸಿಡಿಪಿಒ ಹಾಗೂ ಕಚೇರಿ ಸಿಬ್ಬಂದಿ ಮತ್ತು ಎಂಎಸ್​ಪಿಸಿ ಸಿಬ್ಬಂದಿ ಶಾಮೀಲಾಗಿರುವ ಶಂಕೆ ಇದ್ದು ಕೂಡಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇದರಲ್ಲಿ ಶಾಮೀಲಾದ ಎಲ್ಲ ಸರ್ಕಾರಿ ಸಿಬ್ಬಂದಿ ಅಮಾನತ್ತಿನಲ್ಲಿ ಇರಿಸಿ ವಿಚಾರಣೆ ನಡೆಸಿ ಅಂಗನವಾಡಿ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಂದರು.

ಪ್ರಶಾಂತ ಮುಚ್ಚಂಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.