ನ್ಯೂಸ್

ಹಾಲಿನ ಪುಡಿ ಅಕ್ರಮವಾಗಿ ಮಾರಾಟ

ಹನಗೋಡು: ರಾಜ್ಯ ಸರ್ಕಾರ ಕ್ಷೀರ ಭಾಗ್ಯ ಯೋಜನೆಯಡಿ ಅಂಗನವಾಡಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೀಡುವ ಹಾಲಿನ ಪುಡಿಯನ್ನು ಅಂಗನವಾಡಿ ಕೇಂದ್ರದಿಂದ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ.


ಕಿರಂಗೂರು ಗ್ರಾಪಂ ವ್ತಾಪ್ತಿಯ ಮಾದಳ್ಳಿ ಹಾಡಿಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರತ್ನಮ್ಮ ಸಿಕ್ಕಿ ಬಿದ್ದವರು. ಗುರುವಾರ ಮಧ್ಯಾಹ್ನದ ಸಮಯದಲ್ಲಿ 40 ಪ್ಯಾಕೇಟ್ ಹಾಲಿನ ಪುಡಿಯನ್ನು ಗುಜರಿ ವ್ಯಾಪಾರಕ್ಕೆ ಆಟೋದಲ್ಲಿ ಬಂದಿದ್ದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಲು ಮುಂದಾಗಿದ್ದಳು. ಈ ವೇಳೆ ಗ್ರಾಮಸ್ಥರಾದ ಚಲುವರಾಜ್, ಮಾದೇವ, ಮಂಜು ಅವರ ಕೈಗೆ ಸಿಕ್ಕಿ ಬಿದ್ದಿದ್ದಾರೆ.


ನಾಲ್ಕೈದು ತಿಂಗಳಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸರಿಯಾಗಿ ಉಪಾಹಾರ, ಹಾಲು ವಿತರಿಸದಿರುವ ಬಗ್ಗೆ ಕಾರ್ಯಕರ್ತೆ ರತ್ನಮ್ಮ ಅವರನ್ನು ಕೇಳಿದರೆ ಸಬೂಬು ಹೇಳಿ ದಬ್ಬಾಳಿಕೆ ಮಾತನಾಡುತ್ತಿದ್ದರು. ಈ ಬಗ್ಗೆ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿರಲಿಲ್ಲ. ಇಂದು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಗ್ರಾಮದ ಯುವಕ ಚಲುವರಾಜ್ ವಿಜಯವಾಣಿಗೆ ತಿಳಿಸಿದರು.
ಕಿರಂಗೂರು ಗ್ರಾಪಂ ಅಧ್ಯಕ್ಷ ಮಧು, ಸದಸ್ಯರಾದ ಹರೀಶ್, ಪಿಡಿಒ ಭವ್ಯಾ, ಕೇಶವ, ಕಿರಂಗೂರು ಸ್ವಾಮಿ, ಶಿವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.