ನ್ಯೂಸ್

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Shivamogga

ಶಿವಮೊಗ್ಗ: ಗ್ರಾಚ್ಯುಟಿ ಪಾವತಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಅಂಗನವಾಡಿ ಕಾರ್ಯಕರ್ತೆಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದರನ್ವಯ ರಾಜ್ಯಾದ್ಯಂತ ಸಾವಿರಾರು ನಿವೃತ್ತಿ ನೌಕರರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲವು ಕಡೆ ಅಧಿಕಾರಿಗಳು ಅರ್ಜಿ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಆದ್ದರಿಂದ ಗ್ರಾಚ್ಯುಟಿ ಸಲ್ಲಿಸಿರುವ ಅರ್ಜಿದಾರರಿಗೆ ರಾಜ್ಯ ಸರ್ಕಾರ ಕೂಡಲೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಬಲಿಷ್ಠಪಡಿಸಬೇಕು. ಕೆಲಸದ ಭಾರ ಇಳಿಸಬೇಕು. ವಿವಿಧ ಇಲಾಖೆಗಳ ಸರ್ವೆ ಕೆಲಸಗಳನ್ನು ಕೈಬಿಡಬೇಕು. ಗುಣಮಟ್ಟದ ಆಹಾರ ಒದಗಿಸಬೇಕು. ಹೊಸ ಮೊಬೈಲ್ ನೀಡಬೇಕು. ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಬೇಕು. ಎಸ್ಸೆಸ್ಸೆಲ್ಸಿ ಹಾಗೂ ಪದವೀಧರರಿಗೆ ತರಬೇತಿ ನೀಡಬೇಕು. ಶಿಕ್ಷಕರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಹೊಸದಾಗಿ ಪ್ರಾರಂಭವಾಗುತ್ತಿರುವ 4,500 ಅಂಗನವಾಡಿ ಕೇಂದ್ರಗಳನ್ನು ಈಗಾಗಲೇ ಇರುವ ಮಿನಿ ಅಂಗನವಾಡಿ ಕೇಂದ್ರಗಳ ಅನ್ವಯ ಅದರಡಿಯಲ್ಲಿ ಪೂರ್ಣ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ನ್ಯಾಯಯುತ ಮುಂಬಡ್ತಿಗಳನ್ನು ಕೊಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ವರ್ಗಾವಣೆಗಳಿಗೆ ಅರ್ಹತೆ ಇದ್ದರೂ ಜನಪ್ರತಿನಿಧಿಗಳ ಆಜ್ಞೆಯಂತೆ ನಡೆಯುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸಬೇಕು. ಹುದ್ದೆಯನ್ನು ಕಾಯಂ ಗೊಳಿಸಬೇಕು. ಕೆಲಸದಿಂದ ತೆಗೆದು ಹಾಕಿರುವ ಕಾರ್ಯಕರ್ತೆಯರನ್ನು ಪುನಃ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಶೈಲಜಾ, ಎಸ್.ವರಲಕ್ಷ್ಮಿ, ಆರ್.ಮಂಜುಳಾ, ಎಚ್.ಜಯಲಕ್ಷ್ಮಿ, ಎಚ್.ಎಸ್.ಸುನಂದಾ, ಶ್ಯಾಮಲಾ, ಪ್ರಭಾ ಇತರರಿದ್ದರು.