ನ್ಯೂಸ್

7.9 ಲಕ್ಷ ರೂ. ಖರ್ಚು ಮಾಡಿ ವಿಶ್ವದಲ್ಲೇ ಅತಿ ದೊಡ್ಡ ತುಟಿ ಪಡೆದ ಯುವತಿ!

ಬಲ್ಗೇರಿಯಾ: ಮಹಿಳೆಯರು ಸೌಂದರ್ಯ ಪ್ರಿಯರು. ಸುಂದರವಾಗಿ ಕಾಣಬೇಕು ಎಂದು ಹಲವರು ಇಂಜೆಕ್ಷನ್, ಸರ್ಜರಿ ಎಲ್ಲಾ ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬಳು ಯುವತಿ ವಿಶ್ವದ ಅತಿ ದೊಡ್ಡ ತುಟಿ ಹಾಗೂ ದೊಡ್ಡ ಕೆನ್ನೆ ಬೇಕು ಎಂದು ಚಿಕಿತ್ಸೆ ಪಡೆದುಕೊಂಡಿದ್ದಾಳೆ.

ಬಲ್ಗೇರಿಯಾದ ಸೋಫಿಯಾದ ನಿವಾಸಿ ಆಂಡ್ರಿಯಾ ಇವನೊವಾ ಅತಿ ದೊಡ್ಡ ತುಟಿಗಳನ್ನು ಹೊಂದಲು ಬರೋಬ್ಬರಿ 7.9 ಲಕ್ಷ ರೂ. ಖರ್ಚು ಮಾಡಿದ್ದಾರೆ. ಸದ್ಯ ದೊಡ್ಡ ಕೆನ್ನೆಯ ಮೂಳೆಗಳನ್ನು ಪಡೆಯಬೇಕೆಂದು ಬಯಸಿದ್ದಾರೆ.

25 ವರ್ಷದ ಯುವತಿ ಆಂಡ್ರಿಯಾ ಈ ಕುರಿತಾಗಿ ಮಾತನಾಡಿ, 'ನಾನು ವಿಶ್ವದ ದೊಡ್ಡ ತುಟಿಗಳ ಜತೆಗೆ ದೊಡ್ಡ ಕೆನ್ನೆಯ ಮೂಳೆಗಳನ್ನು ಸಹ ಹೊಂದಲು ಬಯಸುತ್ತೇನೆ. ನನ್ನ ಗುರಿ ಮಾಡೆಲ್ ಆಗುವುದು. ಹೀಗಾಗಿ ಗಮನಾರ್ಹವಾದ ದೊಡ್ಡ ತುಟಿ ಬೇಕು. ಕೆನ್ನೆಯ ಮೂಳೆಗಳಲ್ಲಿ ನಾಲ್ಕು ಹೈಲುರಾನಿಕ್ ಆಸಿಡ್ ಚುಚ್ಚುಮದ್ದನ್ನು ಪಡೆದಿದ್ದೇನೆ. ಆದರೆ ನಾನು ವಾರದೊಳಗೆ ಇನ್ನೆರಡು ಚುಚ್ಚುಮದ್ದನ್ನು ಹಾಕಿಸಿಕೊಳ್ಳುತ್ತೇನೆ' ಎಂದು ಆಂಡ್ರಿಯಾ ತಿಳಿಸಿದ್ದಾರೆ.

'ನನ್ನ ಮುಖವು ಈಗ ತೀಕ್ಷ್ಣವಾಗಿದೆ, ಆದರೆ ನಾನು ಅದನ್ನು ತುಂಬಾ ಇಷ್ಟಪಡುತ್ತೇನೆ. ನನ್ನ ಹೊಸ ನೋಟವನ್ನು ನನ್ನ ಕುಟುಂಬವು ಗೌರವಿಸಬೇಕು. ಜನರ ಕಾಮೆಂಟ್‌ಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನಾನು ಸೌಂದರ್ಯದ ಬಗ್ಗೆ ನನ್ನದೇ ಆದ ಅಭಿರುಚಿ ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದೇನೆ' ಎಂದು ಆಂಡ್ರಿಯಾ ಹೇಳಿದ್ದಾರೆ.