ನ್ಯೂಸ್

ಆಂಧ್ರ ಹುಡುಗ, ತೈವಾನ್ ಹುಡುಗಿ: ಗಡಿ ಮೀರಿದ ಪ್ರೀತಿ, ಅದ್ಧೂರಿ ಮದುವೆ..

ಕೃಷ್ಣಾ: ಪ್ರೀತಿಗೆ ಎಲ್ಲೆಯಿಲ್ಲ ಅಂತಾರೆ. ಜಾತಿ ಬೇಧ ನೋಡದೆ ಚಿಕ್ಕ ಪರಿಚಯವೊಂದು ಕೊಂಚ ಪ್ರೀತಿಗೆ ತಿರುಗುತ್ತಿದೆ. ಆಂಧ್ರದ ಯುವಕನೊಬ್ಬ ತೈವಾನ್​ ಯುವತಿಯನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ದೇವರಕೋಟಾದ ಚಲ್ಲಪಲ್ಲಿಯಲ್ಲಿ ನಡೆದಿದೆ.

ವೇಮುರಿ ಕಿಶೋರ್ ಎಂಬುವವರು ಚಲ್ಲಪಲ್ಲಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದು, ಅವರ ಮಗ ಸಾಯಿ ದಿನಕರ್ ತೈವಾನ್‌ನ ಹ್ಸಿಂಚುನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ವೇಳೆ ಆತನಿಗೆ ಅಲ್ಲಿನ ಫಿಸಿಯೋಥೆರಪಿಸ್ಟ್ ಯುಟಿಂಗ್ ಲಿಯು ಎಂಬಾಕೆಯ ಪರಿಚಯವಾಗಿದ್ದು, ಇಬ್ಬರು ನಡುವೆ ಪ್ರೇಮಾಂಕುರವಾಗಿದೆ. ಕೊನೆಗೆ ಇಬ್ಬರು ಮದುವೆಯಾಗಲು ನಿಶ್ಚಿಯಿಸಿ ಮನೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

ಇಬ್ಬರ ಪ್ರೀತಿಗೆ ಎರಡು ಮನೆಯವರು ಒಪ್ಪಿಗೆ ನೀಡಿದ್ದು, ರವಿವಾರದಂದು ದ್ವಾರಕಾ ತಿರುಮಲದಲ್ಲಿ ಈ ಜೋಡಿ ಹಿಂದೂ ವಿವಾಹ ಸಂಪ್ರದಾಯದಂತೆ ಸಪ್ತಪದಿ ತುಳಿದಿದೆ. ಘಂಟಸಾಲ ಮಂಡಲದ ದೇವರಕೋಟದಲ್ಲಿ ಸೋಮವಾರದಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಈ ಸಮಾರಂಭಕ್ಕೆ ವಧುವಿನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ತೈವಾನ್‌ನಿಂದ ಬಂದಿದ್ದರು. ಈ ವೇಳೆ ಮಹಿಳೆಯರು ರೇಷ್ಮೆ ಸೀರೆ ಮತ್ತು ಪುರುಷರು ರೇಷ್ಮೆ ಪಂಚೆಗಳನ್ನು ಧರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.(ಏಜೆನ್ಸೀಸ್)