ಬೆಂಗಳೂರು: ಜನರ ಕೈಯ್ಯಲ್ಲಿ ಹಣ ಹರಿದಾಡಿದರೆ ಕೊಳ್ಳುವ ಶಕ್ತಿ ಬೆಳೆಯುತ್ತದೆ. ಹೆಚ್ಚೆಚ್ಚು ಖರೀದಿಯಿಂದ ಆರ್ಥಿಕ ಚಟುವಟಿಕೆಗಳು ವೃದ್ಧಿಸಿ, ಜನಸಾಮಾನ್ಯರ ಆದಾಯ ಹೆಚ್ಚುತ್ತದೆ. ಪರೋಕ್ಷವಾಗಿ ತೆರಿಗೆ ಸಂಗ್ರಹಕ್ಕೂ ನೆರವಾಗುತ್ತದೆ. ಇದೇ ಐದು ಗ್ಯಾರಂಟಿ ಯೋಜನೆಗಳ ಯಶಸ್ಸಿನ ಗುಟ್ಟು !.
ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಶುಕ್ರವಾರ ಭೇಟಿಯಾದ ಆಂಧ್ರಪ್ರದೇಶದ ಸಚಿವರ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರಕ್ಕೆ ಜಾರಿಗೆ ಐದು ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆಗೆ ಬಲ, ಸಾಧನೆ ಮಾಹಿತಿ ಹಂಚಿಕೊಂಡರು.
ಉಚಿತ ಸೌಲಭ್ಯಗಳ ಯೋಜನೆ ಎನ್ನುವುದಕ್ಕಿಂತ ಅಗತ್ಯವುಳ್ಳವರಿಗೆ ಆರ್ಥಿಕ ಸ್ವಾತಂತ್ರ್ಯ ತಂದು ಕೊಡುವಲ್ಲಿ ಐದು ಯೋಜನೆಗಳು ಪ್ರಯೋಜನಕಾರಿಯಾಗಿವೆ.
ಮುಖ್ಯವಾಗಿ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ’ ಯೋಜನೆಯ ಯಶಸ್ಸಿನಿಂದ ಆರ್ಥಿಕತೆ ಚೈತನ್ಯ ಲಭಿಸಿದೆ. ಮಹಿಳಾ ಸಬಲೀಕರಣ ದೃಷ್ಟಿಯಿಂದ ಗಮನಾರ್ಹ ಬದಲಾವಣೆಗಳಾಗಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಐದು ಯೋಜನೆಗಳ ಅನುಷ್ಠಾನ, ವಾರ್ಷಿಕವಾಗಿ ಭರಿಸುತ್ತಿರುವ ವೆಚ್ಚ, ಆರ್ಥಿಕ ಸಂಪನ್ಮೂಲಕ ಕ್ರೋಡೀಕರಣ, ನಿರ್ವಹಣೆ, ಅರ್ಹ ಲಾನುಭವಿಗಳಿಗೆ ನಗದು ನೇರ ವರ್ಗಾವಣೆ ಇತ್ಯಾದಿಗಳ ಬಗ್ಗೆ ಆಂಧ್ರ ಸಚಿವರ ನಿಯೋಗ ಸಮಗ್ರವಾಗಿ ಚರ್ಚಿಸಿ ಮಾಹಿತಿ ಪಡೆಯಿತು.
ಇದೇ ವೇಳೆ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಹಿರಿಯ ಅಧಿಕಾರಿಗಳಾದ ಎನ್.ವಿ.ಪ್ರಸಾದ್, ವಿ.ಅನ್ಬುಕುಮಾರ್ ಹಾಜರಿದ್ದು, ವಿವರ ಹಂಚಿಕೊಂಡರು.
ನಿಯೋಗದಲ್ಲಿ ಆಂಧ್ರಪ್ರದೇಶದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್‌ರೆಡ್ಡಿ, ಗೃಹ ಮತ್ತು ವಿಪತ್ತು ನಿರ್ವಹಣೆ ಸಚಿವೆ ಮಂಗಲಪುಡಿ ಅನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಗುಮ್ಮಟ್ಟಿ ಸಂಧ್ಯಾರಾಣಿ, ಹಿರಿಯ ಅಧಿಕಾರಿಗಳು ಇದ್ದರು.