ಕೋಲಾರದ ಆರೋಗ್ಯ ಇಲಾಖೆ ಕಚೇರಿಗೆ ಆಂಧ್ರ ಪ್ರದೇಶದ ಸಚಿವರಾದ ನಾ.ರಾ.ಲೋಕೇಶ್​, ಸತ್ಯಕುಮಾರ್​ ಯಾದವ್​ ಸೋಮವಾರ ಭೇಟಿ ನೀಡಿ ಟಾಟಾ ಡಿಜಿಟಲ್​ ಸೇವೆ ವೀಕ್ಷಿಸಿದರು. 
ನ್ಯೂಸ್

ಡಿಐಎನ್​ಸಿಗೆ ಆಂಧ್ರ ಸಚಿವರ ಭೇಟಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ನಗರದ ಆರೋಗ್ಯ ಇಲಾಖೆ ಕಚೇರಿಗೆ ಆಂಧ್ರ ಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾ.ರಾ.ಲೋಕೇಶ್​ ಹಾಗೂ ಆರೋಗ್ಯ ಸಚಿವ ಸತ್ಯಕುಮಾರ್​ ಯಾದವ್​ ಸೋಮವಾರ ಭೇಟಿ ನೀಡಿ ಟಾಟಾ ಡಿಜಿಟಲ್​ ಸೇವೆ ಪರಿಶೀಲಿಸಿದರು.

ಟಾಟಾ ಡಿಜಿಟಲ್​ ನರ್ವ್​ ಕೇಂದ್ರದಲ್ಲಿನ (ಡಿಐಎನ್​ಸಿ) ಸೌಲಭ್ಯ, ಕಾರ್ಯವೈಖರಿ, ತಂತ್ರಜ್ಞಾನ ವ್ಯವಸ್ಥೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯಕುಮಾರ್​ ಯಾದವ್​, ಆಂಧ್ರದಲ್ಲಿ 10 ಸಾವಿರಕ್ಕೂ ಅಧಿಕ ಆಯುಷ್ಮಾನ್​ ಆರೋಗ್ಯ ಕೇಂದ್ರಗಳು ಹಾಗೂ 1,800 ಪಿಎಚ್​ಸಿಗಳಿವೆ. ರೋಗಗಳ ಸಂಬಂಧ ನಮ್ಮಲ್ಲಿ ಸಮೀಕ್ಷೆ ಕೂಡ ನಡೆಯುತ್ತಿದೆ. ಇದರಿಂದ ತಪಾಸಣೆ ಹಾಗೂ ಚಿಕಿತ್ಸೆಗೆ ಸುಲಭವಾಗುತ್ತದೆ. ಅಂತೆಯೇ, ಆಂಧ್ರದಲ್ಲಿ ತಾಯಿ ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ಗುರಿ ಹೊಂದಿದ್ದು, ಮನೆ ಬಾಗಿಲಿಗೆ ಔಷಧ ಪೂರೈಕೆ ಮಾಡಲಾಗುತ್ತಿದೆ ಎಂದರು.

ಆಂಧ್ರದಲ್ಲಿ ಒಟ್ಟು ಜನ ಸಂಖ್ಯೆಯಲ್ಲಿ ಶೇ.79 ಮಂದಿಗೆ ಅಭಾ ಗುರುತಿನ ಚೀಟಿ ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ರೋಗಿಗಳ ಮಾಹಿತಿ ಸಂಗ್ರಹದ ಮೂಲಕ ಆರೋಗ್ಯ ವ್ಯವಸ್ಥೆಯಲ್ಲಿ ಯಾವ ರೀತಿ ಸುಧಾರಣೆ ತರಬಹುದು ಎಂಬ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದರು.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿರ್ದೇಶನದ ಮೇರೆಗೆ ಡಿಜಿಟಲ್​ ನರ್ವ್​ ಕೇಂದ್ರ ವೀಕ್ಷಿಸಿ ಮಾಹಿತಿ ಪಡೆದಿದ್ದೇವೆ. ಆಂಧ್ರಪ್ರದೇಶದ ಜಿಲ್ಲೆಗಳಲ್ಲೂ ಈ ವ್ಯವಸ್ಥೆ ಅಳವಡಿಸಲು ಯೋಜನೆ ರೂಪಿಸಲು ಕ್ರಮವಹಿಸಲಾಗುವುದು ಎಂದರು.

ಸೌಲಭ್ಯ ಕಂಡು ಸಚಿವರ ಹರ್ಷ

ಕೋಲಾರ ತಾಲೂಕಿನ ವೇಮಗಲ್​ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶೆಟ್ಟಿಹಳ್ಳಿ ಆಯುಷ್ಮಾನ್​ ಆರೋಗ್ಯ ಮಂದಿರಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಅಲ್ಲಿನ ಸೌಲಭ್ಯ ವೀಕ್ಷಿಸಿ ಖುಷಿಪಟ್ಟರು. ಆಂಧ್ರಪ್ರದೇಶದಲ್ಲೂ ತಜ್ಞರೊಂದಿಗೆ ಚರ್ಚಿಸಿ ಅಲ್ಲಿಯೂ ಈ ಸೌಲಭ್ಯ ಅಳವಡಿಸುವ ಬಗ್ಗೆ ಸಚಿವರು ಇಂಗಿತ ವ್ಯಕ್ತಪಡಿಸಿದರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್​ ತಿಳಿಸಿದರು. ಆರೋಗ್ಯ ಸೇವೆ ಉತ್ತಮಪಡಿಸಲು ಕೋಲಾರದಲ್ಲಿ ಟಾಟಾ ಡಿಜಿಟಲ್​ ನರ್ವ್​ ಸೆಂಟರ್​ (ಡಿಐಎನ್​ಸಿ) ಸ್ಥಾಪಿಸಿದ್ದು, 2018ರ ಜನವರಿಯಿಂದ ಕಾಲ್​ ಸೆಂಟರ್​ ವೈಖರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿನ ರೋಗಿಗಳ ನೋಂದಣಿ, ವರ್ಚುವಲ್​ ಕನ್ಸಲ್ಟೇಷನ್​, ವರ್ಚುವಲ್​ ತರಬೇತಿ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಬಗ್ಗೆ ಮಾಹಿತಿ, ಜಾಗೃತಿ, ರೋಗಿಗಳ ಚಿಕಿತ್ಸೆ ನೀಡುತ್ತಿರುವ ತೊಡಗಿದೆ.