ನ್ಯೂಸ್

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿರುದ್ಧ ಸಿಜೆಐಗೆ ದೂರು ನೀಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ

ಮಹತ್ವದ ಬೆಳವಣಿಗೆಯೊಂದರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​.ಜಗನ್​ಮೋಹನ್​ ರೆಡ್ಡಿ ಅವರು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಎಸ್​.ಎ.ಬಾಬ್ಡೆ ಅವರಿಗೆ ಪತ್ರ ಬರೆದಿದ್ದು, ಆಂಧ್ರ ಹೈಕೋರ್ಟ್​ನ ಕಲಾಪಗಳಲ್ಲಿ ಸುಪ್ರೀಂನ ಮುಖ್ಯನ್ಯಾಯಾಧೀಶರೊಬ್ಬರು ಪ್ರಭಾವ ಬೀರುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಸುಮಾರು ಎಂಟು ಪುಟಗಳ ಪತ್ರ ಬರೆದಿರುವ ಜಗನ್​ ರೆಡ್ಡಿ, ಸುಪ್ರೀಂಕೋರ್ಟ್​ನ ಹಾಲಿ ನ್ಯಾಯಾಧೀಶ ಎನ್​. ವಿ.ರಮಣ ಅವರು ಆಂಧ್ರ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಪರವಾಗಿ ಇದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸದ್ಯ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿರುವ, ಅಮರಾವತಿಯಲ್ಲಿನ ಆಕ್ಷೇಪಾರ್ಹ ಭೂ ವ್ಯವಹಾರದಲ್ಲಿ ರಮಣ ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು ಇತರರ ಹೆಸರು ಕೇಳಿಬರುತ್ತಿರುವ ಬಗ್ಗೆ ಜಗನ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಗನ್​ ರೆಡ್ಡಿ ಅಕ್ಟೋಬರ್​ 6ರಂದು ಈ ಪತ್ರ ಬರೆದಿದ್ದು, ಶನಿವಾರ ಸಂಜೆ ಸಿಎಂ ಪ್ರಧಾನ ಸಲಹೆಗಾರ ಅಜೇಯಾ ಕಲ್ಲಂ ಅವರು ಮಾಧ್ಯಮಗಳಿಗೆ ಇದನ್ನು ಬಿಡುಗಡೆ ಮಾಡಿದ್ದಾರೆ.

ಆಂಧ್ರಪ್ರದೇಶದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ, ರಾಜ್ಯದ ಕೋರ್ಟ್ ಆಡಳಿತದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪ್ರಭಾವ ಬೀರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ 2014ರಿಂದ 2019ರವರೆಗೆ ಅಧಿಕಾರದಲ್ಲಿದ್ದ ಎನ್​.ಚಂದ್ರಬಾಬು ನಾಯ್ಡು ಅವರ ಸರ್ಕಾರದ ಆಡಳಿತದಲ್ಲಿ ನಡೆದ ಅವ್ಯವಹಾರಗಳ ತನಿಖೆಗೆ ಆದೇಶಿಸಿದ್ದೇವೆ. ಈ ವಿಚಾರದಲ್ಲಿ ರಮಣ ಅವರು ಚಂದ್ರಬಾಬು ನಾಯ್ಡು ಅವರ ಹಿತ ಕಾಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೇ ಹೈಕೋರ್ಟ್​ನ ಕೆಲವು ನ್ಯಾಯಾಧೀಶರ ಹೆಸರನ್ನೂ ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಾಗೇ, ನಮ್ಮ ರಾಜ್ಯದ ನ್ಯಾಯಾಂಗ ತಟಸ್ಥ ನೀತಿ ಕಾಯ್ದುಕೊಂಡಿದೆ ಎಂದು ಸ್ಪಷ್ಟಪಡಿಸಲು, ಸುಪ್ರೀಂಕೋರ್ಟ್​ ನ್ಯಾಯಾಧೀಶರ ಹಸ್ತಕ್ಷೇಪ ತಡೆಯಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಜೆಐಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)