KSRTC 
ನ್ಯೂಸ್

1ರೂ.ಗೆ ನೋಟಿಸ್, 5ರೂ.ಗೆ ಸಸ್ಪೆಂಡ್: ಕೆಎಸ್ಸಾರ್ಟಿಸಿಯಲ್ಲಿ ಅಂಧಾ ದರ್ಬಾರ್

Bellari - Heera Nayak

ಬೆಂಗಳೂರು: ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ನೀಡದಿರುವುದು, ಅನಧಿಕೃತವಾಗಿ ಲಗೇಜ್ ತೆಗೆದುಕೊಂಡು ಹೋಗುವುದು.. ಹೀಗೆ ಹಲವು ಕಾರಣಕ್ಕೆ ನಿರ್ವಾಹಕರಿಗೆ ಕೆಎಸ್ಸಾರ್ಟಿಸಿ ನೋಟಿಸ್ ನೀಡಿ, ಶಿಸ್ತುಕ್ರಮ ಕೈಗೊಳ್ಳುತ್ತದೆ. ಆದರೆ, ಮಾರ್ಗ ತಪಾಸಣೆ ವೇಳೆ ನಿರ್ವಾಹಕನ ಬಳಿ 1 ರೂ. ಹೆಚ್ಚು ಹಣವಿದೆ ಎಂಬ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ!

ಒಂದು ವಾರದ ಹಿಂದೆ ಕೆಎಸ್ಸಾರ್ಟಿಸಿ ತನಿಖಾಧಿಕಾರಿಗಳು ಮಾರ್ಗ ತಪಾಸಣೆ ವೇಳೆ ಬೇಲೂರು ಡಿಪೋಗೆ ಸೇರಿದ ಬಸ್ ತಪಾಸಣೆಗೆ ಒಳಪಡಿಸಿದ್ದಾರೆ. ನಿರ್ವಾಹಕ ವಿತರಿಸಿರುವ ಟಿಕೆಟ್ ಸಂಖ್ಯೆ ಹಾಗೂ ಸಂಗ್ರಹಿಸಿರುವ ಹಣವನ್ನು ಲೆಕ್ಕ ಹಾಕಿದ್ದಾರೆ. ಈ ವೇಳೆ ನಿರ್ವಾಹಕನ ಬಳಿ 16,300 ರೂ. ಬದಲು 16,301 ರೂ. ಇರುವುದು ತಿಳಿದುಬಂದಿದೆ. ಅಂದರೆ, ಟಿಕೆಟ್ ಮಾರಾಟದ ಹಣಕ್ಕಿಂತ 1 ರೂ. ಹೆಚ್ಚುವರಿ ಇರುವುದು ಪತ್ತೆಯಾಗಿದೆ. ಈ ಕಾರಣ ಮುಂದಿಟ್ಟು ನಿರ್ವಾಹನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನೋಟಿಸ್ ನೀಡಿದೆ.

5 ರೂ.ಗೂ ಅಮಾನತು: ಮತ್ತೊಂದು ಪ್ರಕರಣದಲ್ಲಿ ಮಾರ್ಗ ತಪಾಸಣೆ ವೇಳೆ ಚಿಕ್ಕಮಗಳೂರು ವಿಭಾಗ ಕಡೂರು ಘಟಕದ ಬಸ್​ವೊಂದರಲ್ಲಿ ಚಾಲಕನ ಕ್ಯಾಬಿನ್​ನಲ್ಲಿ ವಾರಸುದಾರ ರಿಲ್ಲದ ಬಾಕ್ಸ್ ಪತ್ತೆಯಾಗಿದೆ. 5 ರೂ. ಲಗೇಜ್ ದರ ವಿಧಿಸದೆ ಬಾಕ್ಸ್ ಸಾಗಿಸುತ್ತಿದ್ದ ಆರೋಪದಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ,ಕೆಲಸದಿಂದ ಅಮಾನತು ಮಾಡಲಾಗಿದೆ.

ಅಧಿಕಾರಿಗಳ ವಿರುದ್ಧ ಆಕ್ರೋಶ: ಸಣ್ಣ ವಿಚಾರಗಳಿಗೆ ಚಾಲಕ ಮತ್ತು ನಿರ್ವಾಹಕರಿಗೆ ತನಿಖಾಧಿ ಕಾರಿಗಳು ಕಿರುಕುಳ ನೀಡುತ್ತಿದ್ದು, ಪ್ರತಿನಿತ್ಯ ಚಾಲನಾ ಸಿಬ್ಬಂದಿ ಮೇಲೆ ಶೋಷಣೆ ನಡೆಯುತ್ತಿದೆ. ನಿರ್ವಾಹಕನ ಬಳಿ ಒಂದು ರೂ. ಹೆಚ್ಚುವರಿ ಹಣ ಪ್ರಯಾಣಿಕರು ಚಿಲ್ಲರೆ ಪಡೆಯದೇ ಹೋಗಿರಲೂಬಹುದು. ಇದ್ಯಾವುದನ್ನೂ ಯೋಚಿಸದೆ ನೋಟಿಸ್ ನೀಡಲಾಗಿದೆ. ಅದೇ ರೀತಿ 5 ರೂ. ಲಗೇಜ್ ಶುಲ್ಕ ವಸೂಲಿ ಮಾಡಿಲ್ಲ ಎಂಬ ಕಾರಣಕ್ಕೆ ಚಾಲಕನನ್ನೇ ಅಮಾನತು ಗೊಳಿಸಲಾಗಿದೆ. ಹೀಗೆ ನಿತ್ಯ ಒಂದಿಲ್ಲೊಂದು ಕಾರಣ ನೀಡಿ ಅಮಾನತು, ನೋಟಿಸ್ ನೀಡಲಾಗುತ್ತಿರುವ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೌಕರರನ್ನು ಅಮಾನತುಗೊಳಿಸಿ ವೇತನದ ಹೊರೆ ಇಳಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದರೆ ಎಂದೂ ಆರೋಪಿಸಲಾಗುತ್ತಿದೆ.