ನವದೆಹಲಿ: ದಕ್ಷಿಣ ಭಾರತದಲ್ಲಿ ಬಾಳೆ ಎಲೆ ಮೇಲೆ ಊಟ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಆದ್ದರಿಂದ, ಮದುವೆ, ಮುಂಜಿ ಕಾರ್ಯಕ್ರಮಗಳು ಸೇರಿ ಶುಭ ಕಾರ್ಯಕ್ರಮಗಳು ಸೇರಿ ಯಾವುದೇ ಕಾರ್ಯಕ್ರಮವಾದರೂ ಬಾಳೆ ಎಲೆ ಊಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಕರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಅಂಶ ಉತ್ತರ ಭಾರತೀಯರಿಗೂ ಮನವರಿಕೆಯಾದಂತಿದೆ.
ದೇಶದ ಪ್ರಖ್ಯಾತ ವಾಹನ ತಯಾರಿಕಾ ಕಂಪನಿ ಮಹೀಂದ್ರಾದಲ್ಲಿ ಪೇಪರ್ ಪ್ಲೇಟ್ಗಳ ಬದಲು ಬಾಳೆ ಎಲೆ ಮೇಲೆ ಊಟ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕಂಪನಿಯ ಈ ಕ್ರಮದ ಹಿಂದೆ ಮಾಜಿ ಪತ್ರಕರ್ತೆಯೊಬ್ಬರ ಸಲಹೆಯೂ ಇದೆ.
ಆಗಿದ್ದೇನೆಂದರೆ, ನಿವೃತ್ತ ಪತ್ರಕರ್ತೆ ಪದ್ಮಾ ರಾಮನಾಥ್ ಎಂಬುವರು ಮಹೀಂದ್ರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರಿಗೆ ಇ-ಮೇಲ್ ಸಂದೇಶ ರವಾನಿಸಿ, ಕೋವಿಡ್ 19 ಪಿಡುಗಿನ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್ಡೌನ್ ಘೋಷಿಸಲಾಗಿದೆ. ಬಾಳೆಹಣ್ಣು ಬೆಳೆಯುವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಅವರಿಂದ ಬಾಳೆ ಎಲೆಗಳನ್ನು ಖರೀದಿಸಿ, ಅದರ ಮೇಲೆ ಊಟ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ರೈತರಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರಂತೆ.
ಇದನ್ನು ತಕ್ಷಣವೇ ಒಪ್ಪಿಕೊಂಡ ಆನಂದ್ ಮಹೀಂದ್ರಾ ತಮ್ಮ ಸಮೂಹದ ಎಲ್ಲಾ ಫ್ಯಾಕ್ಟರಿಗಳಲ್ಲಿ ಬಾಳೆ ಎಲೆ ಊಟವನ್ನು ಕಡ್ಡಾಯಗೊಳಿಸಿ ಆದೇಶಿಸಿದರು. ಅಲ್ಲದೆ, ಬಾಳೆ ಎಲೆಗಳನ್ನು ಖರೀದಿಸಿ ಫ್ಯಾಕ್ಟರಿಯ ಕ್ಯಾಂಟೀನ್ಗೆ ತಲುಪಿಸಲೂ ಮುಂದಾದರು.
ಈ ವಿಷಯವನ್ನು ಆನಂದ್ ಮಹೀಂದ್ರಾ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಕೇವಲ ಒಂದು ಗಂಟೆ ಅವಧಿಯಲ್ಲಿ 13 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ಒಟ್ಟಾರೆ, ಆನಂದ್ ಮಹೀಂದ್ರಾ ಅವರು ಸಂಕಷ್ಟದಲ್ಲಿರುವ ಬಾಳೆ ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗಿದ್ದಲ್ಲದೆ, ತಮ್ಮ ಸಮೂಹದ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆರೋಗ್ಯದಾಯಕ ರೀತಿಯಲ್ಲಿ ಬಾಳೆ ಎಲೆ ಮೇಲೆ ಊಟ ಮಾಡುವ ಸೌಭಾಗ್ಯವನ್ನೂ ಕರುಣಿಸಿ, ಅವರ ಆರೋಗ್ಯ ಕಾಪಾಡಲು ಮುಂದಾಗಿದ್ದಾರೆ.