ಪದವಿ ಹಂತದಲ್ಲಿ ಎದುರಾದ ಕೆಲವರ ಸ್ನೇಹ, ನಿರ್ಮಾಣವಾದ ಓದುವ ವಾತವಾರಣ, ಹೆಗಲಿಗೆ-ಹೆಗಲು ಕೊಟ್ಟು ಸಾಥ್ ನೀಡಿ ಓದಿಗೆ ಆತ್ಮವಿಶ್ವಾಸ ಹೆಚ್ಚಿಸಿದ ನನ್ನ ಕುಟುಂಬ ಅಖಿಲ ಭಾರತ ಮಟ್ಟದ ಹುದ್ದೆಗಳಿಗೆ ಅಭ್ಯಾಸ ನಡೆಸಲು ದಾರಿ ಮಾಡಿಕೊಟ್ಟಿವೆ ಎನ್ನುವುದು ಈ ಬಾರಿ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ 41ನೇ ರ‌್ಯಾಂಕ್ ಪಡೆದ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ನಾಗರಾಳ ಗ್ರಾಮದ ಯುವ ಪ್ರತಿಭೆ ಆನಂದ ಕುಮಾರ ಅಭಿಪ್ರಾಯ. ಶಿಕ್ಷಣ, ಅಧ್ಯಯನ, ಗುರಿ ತಲುಪಿದ ಹಂತ ತಾಳ್ಮೆಯ ಜತೆಗಿನ ನಿರಂತರ ಪ್ರಯತ್ನದ ಕುರಿತು ಆನಂದ ಕುಮಾರ ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ನ ಸಂಡೇ ಗೆಸ್ಟ್ ಆಗಿ ಹಂಚಿಕೊಂಡಿದ್ದಾರೆ.
ತಾಳ್ಮೆಯ ಬೆನ್ನತ್ತಿ ಹೊರಟವನಿಗೆ 3ನೇ ಪ್ರಯತ್ನದಲ್ಲಿ ಯಶಸ್ಸು
ಗುರಿಯ ಹಾದಿಯಲ್ಲಿ ‘ಆತ್ಮವಿಶ್ವಾಸ ಮತ್ತು ತಾಳ್ಮೆ’ ತುಂಡರಿಸಲಾಗದ ಮಾರ್ಗಗಳು. ಸದಾ ಆ ಮಾರ್ಗದಲ್ಲಿ ಪ್ರಯತ್ನವೆಂಬ ಉರುಗೋಲನ್ನು ಹಿಡಿದು ನಡೆದಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೇ ಆನಂದ ಕುಮಾರ ಸಾಧನೆಯೇ ಸಾಕ್ಷಿ. ಪದವಿ ಹಂತದಲ್ಲೇ ನಾಗರಿಕ ಸೇವಾ ಪರೀಕ್ಷೆ ಕುರಿತು ತಿಳಿದ ಆನಂದಕುಮಾರ ಓದಿಗೆ ಸರಿಯಾದ ಚೌಕಟ್ಟು ನೀಡಿದು ಬೆಂಗಳೂರಿನಲ್ಲಿನ ಅಧ್ಯಯನ. ನಾಗರಿಕ ಪರೀಕ್ಷೆ ಏನು ಡಿಮ್ಯಾಂಡ್ ಮಾಡುತ್ತದೆ, ಅದಕ್ಕೆ ಪೂರಕವಾಗಿ ಪೂರ್ಣ ಪ್ರಮಾಣದಲ್ಲಿ ಮಾಗುವುದು ಹೇಗೆ ಎನ್ನುವುದನ್ನು ಅರಿತು ಪರೀಕ್ಷಾ ಸಿದ್ಧತೆ ಆರಂಭಿಸಿ, ಪರೀಕ್ಷೆ ಆಳ-ಅಗಲಕ್ಕೆ ಸಮನಾಗಿ ಗಂಬೀರ ಓದಿನತ್ತ ವಾಲಿದರು. 2021ರಲ್ಲಿ ಪ್ರಾರಂಭವಾದ ಕನಸಿನ ಪಯಣಕ್ಕೆ 2024ರಲ್ಲಿನ ಐಎಫ್ಎಸ್ ಪರೀಕ್ಷೆಯಲ್ಲಿ ಯಶಸ್ಸಿನ ನಿಲ್ದಾಣವೊಂದು ದೊರೆಂತತಾಗಿದೆ. ಅದರೊಂದಿಗೆ ಐಎಎಸ್‌ನ ಕನಸಿನ ನನಸಿಗೂ ಚಿಂತನೆ ನಡೆಸಿ, ಅದರ ಓದಿನ ತಯಾರಿಯಲ್ಲೂ ನಿರತರಾಗಿದ್ದಾರೆ.
ಸ್ಥಳೀಯವಾಗಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದಾರೆ. ಧಾರವಾಡದ ಕೃಷಿ ವಿವಿಯಲ್ಲಿ ಬಿಎಸ್ಸಿ ಅಗ್ರಿ ಪದವಿ ಪಡೆದಿದ್ದಾರೆ. ನಂತರ ನಾಗರಿಕ ಪರೀಕ್ಷೆ ಒಲವಿದ್ದ ಕಾರಣ ಬೆಂಗಳೂರಿಗೆ ದಾವಿಸಿದ ಆನಂದ ಕುಮಾರ ತಮ್ಮ ಸಂಪೂರ್ಣ ಗಮನವನ್ನು ಯುಪಿಎಸ್ಸಿ ಪರೀಕ್ಷೆಗೆ ದಾರೆ ಎರೆದರು. ತಾತ ಪರಮೇಶ್ವರಪ್ಪ ಆರೋಗ್ಯ ಇಲಾಖೆಯಲ್ಲಿ ಸೇವೆಸಲ್ಲಿಸಿದರೇ, ತಂದೆ ಬಸವರಾಜ ಕೆ.ಎಸ್.ಆರ್.ಟಿ.ಸಿ. ಡ್ರೈವರ್ ಕಮ್ ಕಂಡೆಕ್ಟರ್ ಆಗಿದ್ದಾರೆ, ತಾಯಿ ನಾಗರತ್ನ ಟೇಲರಿಂಗ್ ವೃತ್ತಿಯಲ್ಲಿ, ತಂಗಿ ವಿದ್ಯಾ ಶ್ರೀ ಎಂಎಸ್ಸಿ ಅಧ್ಯಯನದಲ್ಲಿ ತೊಡಗಿದ್ದಾರೆ. ಆನಂದಕುಮಾರ ಸಾಧನೆಗೆ ಇವರೆಲ್ಲರೂ ಆತ್ಮವಿಶ್ವಾಸದ ದೀವೆಗೆಯಾಗಿ ನಿಂತು ಸಹಕರಿಸಿದ್ದಾರೆ.
ಹೆಗಲಿಗೆ ಹೆಗಲು ಕೊಟ್ಟು ಸಾಥ್ ನೀಡಿದ ಕುಟುಂಬ
ಪದವಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಪ್ರಪಂಚಕ್ಕೆ ದಾವಿಸಬೇಕೆನ್ನುವ ಹಂಬಲವಿದ್ದ ಆನಂದಕುಮಾರ್‌ಗೆ ಬೆಂಗಳೂರಿನಲ್ಲಿ ಓದಿಗೆ ತಕ್ಕ ವಾತವರಣ ದೊರೆಯಿತು. ಪರಿಣಾಮವಾಗಿ ಸ್ನೇಹಿತರೊಡನೆ ಒಗ್ಗೂಡಿ ಅಧ್ಯಯನ ಆರಂಭಿಸಿದರು. ಪರೀಕ್ಷೆಗೆ ತೆರನಾದ ಅಭ್ಯಾಸ ಹಾಗೂ ಸಾಮಾಗ್ರಿಗಳನ್ನು ಕಲೆ ಹಾಕುತ್ತ ಸ್ಥಿರತೆಯೊಡನೆ ಓದಿನಲ್ಲಿ ತೊಡಗಿಕೊಂಡು, ಟೆಸ್ಟ್ ಸಿರೀಸ್, ಮಾಕ್ ಟೆಸ್ಟ್,ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ, ಅಗತ್ಯಕ್ಕಿಂತ ಹೆಚ್ಚಿನ ಮಟ್ಟದ ಅಭ್ಯಾಸ ನಡೆಸಿ ತಮ್ಮ 3ನೇ ಪ್ರಯತ್ನದಲ್ಲಿ ಆನಂದ ಕುಮಾರ ಸಾಧನೆ ಮೆಟ್ಟಿಲೇರಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಯತ್ತ ಆತ್ಮವಿಶ್ವಾಸದ ಹೆಜ್ಜೆ
ಸಾಮಾನ್ಯವಾಗಿ ಪ್ರಿಲಿಮ್ಸ್ ಹಾಗೂ ಮೇನ್ಸ್‌ಗೆ ಹೋಲಿಸಿದರೇ, ಪ್ರಿಲಿಮ್ಸ್‌ಗಿಂತಲೂ ಮೇನ್ ಪತ್ರ್ರಿಕೆ ನಮ್ಮಲ್ಲಿನ ಸಾಮರ್ಥ್ಯ ಮತ್ತು ಜ್ಞಾನದ ಆಳವನ್ನು ಪರೀಕ್ಷಿಸುತ್ತದೆ. ಅಲ್ಲಿ ಬರವಣಿಗೆ ಮುಖ್ಯ. ಆದ್ದರಿಂದ ಮೇನ್ಸ್‌ಗೆ ಪ್ರಿಲಿಮ್ಸ್‌ಗಿಂತ ಹೆಚ್ಚಿನ ಹಾಗೂ ಪ್ರತ್ಯೇಕವಾದ ಓದಿನ ಕ್ರಮ ಮುಖ್ಯ. ತದನಂತರ ಎದುರಾಗುವ ಸಂದರ್ಶನದಲ್ಲಿ ಆಯ್ದುಕೊಂಡ ಐಚ್ಛಿಕ ಭಾಷೆ ಹಾಗೂ ಪದವಿ ಮತ್ತು ಪ್ರಚಲಿತ ಜ್ಞಾನದ ಅರಿವು ನಮ್ಮಲ್ಲಿ ಮೇಳೈಸುತ್ತಿರಬೇಕು. ಆಗ ಮಾತ್ರ ಉನ್ನತ ಹುದ್ದೆಯ ಕನಸು ನನಸಾಗುತ್ತದೆ ಎನ್ನುವುದು ಆನಂದ ಕುಮಾರ ಆಶಯ.
ಪರೀಕ್ಷೆ ಪ್ರತಿ ಹಂತಕ್ಕೂ ಪ್ರತ್ಯೇಕ ಓದಿನ ಕ್ರಮವಿರಲಿ
ಐಎಫ್ಎಸ್‌ನಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾದ ನಂತರ ಡಿಎಎಫ್ (ಡಿಟೈಲ್ಡ್ ಅಪ್ಲಿಕೇಷನ್ ) ಭರ್ತಿ ಮಾಡಬೇಕಾಗುತ್ತದೆ. ಇದು ಮೂಲಭೂತವಾಗಿ ಅಭ್ಯರ್ಥಿಗಳ ವೈಯಕ್ತಿಕ ವಿವರ, ಶೈಕ್ಷಣಿಕ ಹಿನ್ನೆಲೆ, ಕೆಲಸದ ಅನುಭವ ಮತ್ತು ಹವ್ಯಾಸಗಳನ್ನೊಳಗೊಂಡ ವಿವರವಾದ ಮಾಹಿತಿ ಒದಗಿಸುವ ಅಗತ್ಯವಿರುವ ಸಮಗ್ರ ಅರ್ಜಿ ನಮೂನೆ. ಇಲ್ಲಿ ದಾಖಲಾದ ವಿವರಗಳೇ ಮೇಲೆಯೆ ಸಂದರ್ಶನದಲ್ಲಿ ಬಹುತೇಕ ಪ್ರಶ್ನೆಗಳು ಎದುರಾಗುತ್ತವೆ. ಆದ್ದರಿಂದ ದಾಖಲಿಸಿದ ಎಲ್ಲ ವಿವರಗಳಲ್ಲೂ ಸಕಲ ಕಲಾ ವಲ್ಲಭರಾಗಿರಬೇಕು. ನಾಗರಿಕ ಸೇವಾ ಪರೀಕ್ಷೆ ‘ದಿಸ್ ಇಸ್ ಅ ಲಾಂಗ್ ಪ್ರೊಸೆಸ್, ಬಟ್ ನೆವರ್ ಕಾಂಪರ್ ಮೈಸ್’ ಇಲ್ಲಿ ನಮ್ಮ ಮೇಲೆ ಇನ್ನೊಬ್ಬರಿಗಿಂತ ನಮಗೇ ಹೆಚ್ಚು ನಂಬಿಕೆ ಇರಬೇಕು. ಯಾವ ಹಂತದಲ್ಲೂ ದೃತಿಗೆಡದೆ ಪ್ರಯತ್ನ ಪಟ್ಟರೇ ಸಾಧನೆ ಸುಲಭ ಎನ್ನುವುದು ಆನಂದ ಕುಮಾರ ಕಿವಿಮಾತು.
-ಭೀಮಸಿ ಕೋಳೆಪ್ಪನವರ