ವುಹಾನ್: ಕೊರೊನಾ ದಾಳಿಗೆ ತುತ್ತಾಗಿರುವ ಚೀನಾದಿಂದ ಎರಡು ವಿಶೇಷ ವಿಮಾನಗಳು ಭಾರತೀಯರನ್ನು ಕರೆತಂದಿವೆ. ಆದರೆ ಈ ಎರಡೂ ವಿಮಾನಗಳಲ್ಲಿ ಬರಲು ಅವಕಾಶ ಸಿಗದ ಭಾರತ ಮೂಲದ ಆನಂದ್ ಜ್ಯೋತಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮೂಲತಃ ಭಾರತದ ಆಂಧ್ರ ಪ್ರದೇಶದವರಾದ ಆನಂದ್ ಜ್ಯೋತಿ ಚೀನಾದ ವುಹಾನ್ನಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 22 ವರ್ಷದ ಜ್ಯೋತಿಗೆ ಫೆಬ್ರವರಿ 18ರಂದು ಆಂಧ್ರದಲ್ಲಿ ಮದುವೆ ಫಿಕ್ಸ್ ಆಗಿದೆ. ಇದೇ ಸಮಯದಲ್ಲಿ ಚೀನಾಕ್ಕೆ ಕಾಲಿಟ್ಟಿರುವ ಮಹಾಮಾರಿ ಕೊರೊನಾದಿಂದಾಗಿ ಆಕೆ ತತ್ತರಿಸಿದ್ದಾರೆ. ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ತೆರಳಿದ್ದ ಮೊದಲ ವಿಮಾನದಲ್ಲಿ ಬರುವುದಕ್ಕೆಂದು ಅರ್ಜಿ ಹಾಕಿದ್ದಾರೆ. ಆದರೆ ಆ ಸಮಯದಲ್ಲಿ ಆಕೆಯ ದೇಹದಲ್ಲಿ ಹೆಚ್ಚಿನ ಉಷ್ಣಾಂಶ ಕಂಡುಬಂದ ಹಿನ್ನೆಲೆ ಆಕೆಯನ್ನು ವಿಮಾದೊಳಗೆ ಹತ್ತಲು ಅನುಮತಿ ನೀಡಲಾಗಿರಲಿಲ್ಲ. ಎರಡನೆಯ ವಿಮಾನದಲ್ಲಿ ಆಕೆಗೆ ಅನುಮತಿ ನೀಡುವುದಾಗಿ ತಿಳಿಸಲಾಗಿತ್ತು. ನಿನ್ನೆ (ಫೆ.2) ಎರಡನೆಯ ವಿಮಾನವೂ ಸಹ ಭಾರತಕ್ಕೆ ಬಂದಿದ್ದು ಅದರಲ್ಲಿಯೂ ಜ್ಯೋತಿಗೆ ಅನುಮತಿ ನೀಡಲಾಗಿಲ್ಲ. ದೇಹದಲ್ಲಿ ಜ್ವರ ಇದ್ದ ಕಾರಣ ಆಕೆಯನ್ನು ವಿಮಾನದೊಳಗೆ ಹತ್ತಿಸಿಕೊಳ್ಳಲಾಗಿಲ್ಲ.
ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಜ್ಯೋತಿ, "ನಾನು ಮತ್ತು ನನ್ನ 57 ಸಹೋದ್ಯೋಗಿಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ತೆರಳಲು ಅರ್ಜಿ ಸಲ್ಲಿಸಿದ್ದೆವು. ಆದರೆ ಮೊದಲ ವಿಮಾನವು ದೇಹದಲ್ಲಿ ಹೆಚ್ಚಿನ ಉಷ್ಣಾಂಶ ಇದೆ ಎಂಬ ಕಾರಣಕ್ಕೆ ಇಬ್ಬರನ್ನು ಬಿಟ್ಟು ಹೋಯಿತು. ಈಗ ಜ್ವರದಿಂದಾಗಿ ಎರಡನೇ ವಿಮಾನವೂ ಸಹ ಬಿಟ್ಟು ಹೋಗಿದೆ. ನನಗೆ ಮಾನಸಿಕವಾಗಿ ಒತ್ತಡ ಉಂಟಾದ ಕಾರಣದಿಂದ ದೇಹದ ಉಷ್ಣಾಂಶದಲ್ಲಿ ವ್ಯತ್ಯಾಸ ಕಂಡುಬಂದಿದೆ. ಚೀನಾದ ವೈದ್ಯಕೀಯ ಇಲಾಖೆಯವರು ನನ್ನಲ್ಲಿ ಕೊರೊನಾ ವೈರಸ್ ಇರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ನನ್ನಲ್ಲಿ ವೈರಸ್ ಇಲ್ಲ ಎನ್ನುವುದನ್ನು ವೈದ್ಯಕೀಯ ಪರೀಕ್ಷೆಗಳ ಮೂಲಕ ಸಾಬೀತು ಮಾಡಲು ನಾನು ಸಿದ್ಧಳಿದ್ದೇನೆ" ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಳಲನ್ನು ತೋಡಿಕೊಂಡಿರುವ ಜ್ಯೋತಿ ದಯಮಾಡಿ ನನ್ನನ್ನು ಭಾರತಕ್ಕೆ ಕರೆದುಕೊಂಡು ಹೋಗಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜನವರಿ 31ರಂದು ವುಹಾನ್ನಿಂದ ಭಾರತಕ್ಕೆ ಬಂದ ವಿಶೇಷ ವಿಮಾನವು 300 ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿತ್ತು. ನಿನ್ನೆ ಎರಡನೇ ವಿಶೇಷ ವಿಮಾನವು ಭಾರತಕ್ಕೆ ಬಂದಿಳಿದಿದ್ದು ಮಾಲ್ಡೀವ್ಸ್ನ ಏಳು ಜನರು ಸೇರಿ ಒಟ್ಟು 323 ಜನರು ದೇಶಕ್ಕೆ ಮರಳಿದ್ದಾರೆ. (ಏಜೆನ್ಸೀಸ್)