ವಿಶ್ವ ಚೆಸ್ ಆಡಳಿತ ಸಂಸ್ಥೆ ಫಿಡೆಗೆ ವಿಶ್ವನಾಥನ್ ಆನಂದ್ ಹಂಗಾಮಿ ಅಧ್ಯಕ್ಷ
ನವದೆಹಲಿ: ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ (Viswanathan Anand) ವಿಶ್ವ ಚೆಸ್ ಆಡಳಿತ ಸಂಸ್ಥೆಯಾಗಿರುವ ಅಂತಾರಾಷ್ಟ್ರೀಯ ಚೆಸ್ (chess) ಒಕ್ಕೂಟದ (ಫಿಡೆ) ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರಷ್ಯಾ-ಯೂಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಯುರೋಪಿಯನ್ ಒಕ್ಕೂಟದ (ಇಯು) ರ್ನಿಬಂಧಿತ ವ್ಯಕ್ತಿಗಳ ಪಟ್ಟಿಗೆ ಸೇರ್ಪಡೆಯಾದ ಬೆನ್ನಲ್ಲೇ ಹಾಲಿ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಆನಂದ್ಗೆ ಈ ಹುದ್ದೆ ಒಲಿದಿದೆ.
56 ವರ್ಷದ ಆನಂದ್ 2022ರಿಂದ ಫಿಡೆ ಉಪಾಧ್ಯಕ್ಷರಾಗಿದ್ದರು. ಡ್ವೊಕೋರ್ವಿಚ್ ರಷ್ಯಾದವರಾಗಿದ್ದು, ಇಯು ರ್ನಿಬಂಧದಿಂದಾಗಿ ಅವರ ಖಾತೆ ಸ್ಥಗಿತವಾಗಿದ್ದು, ಪ್ರಯಾಣ ನಿಷೇಧಕ್ಕೊಳಗಾಗಿದ್ದಾರೆ. ಇದರ ವಿರುದ್ಧ ಅವರು ಕಾನೂನು ಮೊರೆ ಹೋಗಲಿದ್ದರೂ, ಅದುವರೆಗೆ ಫಿಡೆ ಹುದ್ದೆಯಿಂದ ಹೊರಗುಳಿಯಲಿದ್ದಾರೆ. ಸೆಪ್ಟೆಂಬರ್ನಲ್ಲಿ ಫಿಡೆಗೆ ಹೊಸದಾಗಿ ಚುನಾವಣೆ ನಡೆಯಲಿದೆ.
"ವಿಶ್ವನಾಥನ್ ಆನಂದ್ ಅವರು ತಮ್ಮ ಸಮಗ್ರತೆ, ಬುದ್ಧಿವಂತಿಕೆ ಮತ್ತು ಚೆಸ್ ಕ್ರೀಡೆಗೆ ನೀಡಿರುವ ಅಪಾರ ಕೊಡುಗೆಯಿಂದ ಜಾಗತಿಕ ಚೆಸ್ನಲ್ಲಿ ವಿಶೇಷ ಗೌರವ ಗಳಿಸಿದ್ದಾರೆ. ಅವರು ಉತ್ತಮ ಆಡಳಿತ ನಡೆಸುವ ಭರವಸೆ ಇದೆ' ಎಂದು ಅಖಿಲ ಭಾರತ ಚೆಸ್ ಒಕ್ಕೂಟದ ಅಧ್ಯಕ್ಷ ನಿತಿನ್ ನಾರಂಗ್ ತಿಳಿಸಿದ್ದಾರೆ.