| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಮೇಲ್ಮನೆಗೆ ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರದ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶವು ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿದೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ತಲಾ 11 ಸ್ಥಾನಗಳಲ್ಲಿ ಗೆದ್ದು ಬೀಗಿದರೆ ಜೆಡಿಎಸ್ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಉಳಿದ ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ. 2023ರಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಅಲ್ಲದಿದ್ದರೂ ರಾಜಕೀಯ ಪಕ್ಷಗಳಿಗೆ ಒಂದು ರೀತಿಯಲ್ಲಿ ಮುಂದಿನ ಹೋರಾಟಕ್ಕೆ ಉತ್ಸಾಹ ಮೂಡಿಸುವುದಲ್ಲದೆ, ನಾಡಿಮಿಡಿತದ ಅರಿವು ನೀಡುತ್ತದೆ. ಆದರೆ ಫಲಿತಾಂಶ ಆಯಾ ಪಕ್ಷಗಳಿಗೆ ತೃಪ್ತಿಯನ್ನೇನೂ ತಂದಿಲ್ಲ, ನಿರೀಕ್ಷೆಯನ್ನೂ ಪೂರ್ಣಗೊಳಿಸಿಲ್ಲ.
ಆದರೆ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಗೆ ಸರಿಸಮಾನ ವಾಗಿ ಗೆದ್ದಿರುವುದು ಅಚ್ಚರಿಗೂ ಕಾರಣ ವಾಗಿದೆ. ಈ ಚುನಾವಣೆಯಲ್ಲಿ ಮತದಾರರು ಪಕ್ಷ, ಜಾತಿ, ಧರ್ಮ ಮೀರಿ ಮತ ಹಾಕಿರುವುದು ಫಲಿತಾಂಶ ದಿಂದ ಕಂಡು ಬರುತ್ತಿದೆ. ಮುಂದಿನ ಚುನಾವಣೆಗೆ ಸ್ಥಳೀಯ ಮಟ್ಟದಲ್ಲಿ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಪಕ್ಷಗಳಿಗೆ ಒಂದು ರೀತಿಯ ವೇದಿಕೆಯಂತೂ ಸಿಕ್ಕಿದೆ. ಆದರೆ ಮೂರೂ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವ ನ್ನಂತೂ ಈ ಫಲಿತಾಂಶ ಸಾರಿದೆ. ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆ ನಂತರ ಮೇಲ್ಮನೆ ಚುನಾವಣೆಯಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆದಿತ್ತು. ಜೆಡಿಎಸ್ ಇಲ್ಲಿಯೂ ನಗಣ್ಯವಾಗಿದೆ. ಹಳೆಯ ಮೈಸೂರು ಭಾಗ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದ್ದರೆ, ಕಿತ್ತೂರು ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿದೆ. ಒಕ್ಕಲಿಗರ ನೆಲೆಯಾದ ಮೈಸೂರು ಭಾಗದಲ್ಲಿ ಜೆಡಿಎಸ್ ನೆಲಕಚ್ಚಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೋರಾಟ ನಡೆದಿದೆ. ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿತ್ತು.
ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ ಅದರಿಂದಲೇ ಹಿಗ್ಗುವಂತಿಲ್ಲ. ಅಧಿಕಾರದಲ್ಲಿರುವ ಪಕ್ಷಕ್ಕೆ ಬೇರೆ ಬೇರೆ ಅನುಕೂಲಗಳು ಇದ್ದೇ ಇರುತ್ತವೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅನುಕೂಲ ಬಳಸಿಕೊಳ್ಳಲು ಹಿಂದೇಟು ಹಾಕುವುದಿಲ್ಲ. ಆದರೂ ಇಲ್ಲಿ 11 ಸ್ಥಾನಗಳನ್ನು ಗೆಲ್ಲಲು ತಿಣುಕಿದಂತೆ ಕಾಣುತ್ತಿದೆ. ಕಾಂಗ್ರೆಸ್ ಸಹ ಅಷ್ಟೇ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಅಧಿಕ ಅಂತರದ ಗೆಲುವು ಕೆಲವು ಕಡೆ ಮಾತ್ರ ಸಿಕ್ಕಿದೆ. ಚಿಕ್ಕಮಗಳೂರಿನಂತಹ ಬಿಜೆಪಿಯ ಗಟ್ಟಿ ನೆಲೆ ಇರುವ ಕಡೆ ಕೇವಲ 6 ಮತಗಳ ಅಂತರದ ಗೆಲುವು ಸಿಕ್ಕಿದೆ. ಕೊಡಗಿನಲ್ಲಿ ಕಳೆದ ಚುನಾವಣೆಗಿಂತ ಗೆಲುವಿನ ಅಂತರ ಕಡಿಮೆಯಾಗಿದೆ. ಮಂಡ್ಯದಲ್ಲಿ ಬಿಜೆಪಿ ಪಡೆಯಲು ಸಾಧ್ಯವಾಗಿರುವ ಮತಗಳು ಅತ್ಯಂತ ಕಡಿಮೆ.
ದ್ವಿಸದಸ್ಯ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಹೊರತುಪಡಿಸಿ ಉಳಿದ ನಾಲ್ಕರಲ್ಲಿ ಎರಡು ಗೆದ್ದಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಬೆಳಗಾವಿ ಹಾಗೂ ಮೈಸೂರಿನಲ್ಲಿ ಮೂರನೇ ಸ್ಥಾನಕ್ಕೆ ಬಂದು ಸೋತಿದೆ. ಬೆಳಗಾವಿಯಲ್ಲಿ ಪಕ್ಷದ ಶಾಸಕರೇ ಸಹೋದರನನ್ನು ಪಕ್ಷೇತರನಾಗಿ ಗೆಲ್ಲಿಸಿಕೊಂಡಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತು ಮಾಡಿದೆ.
ಬಿಜೆಪಿ ಪ್ರತಿ ಜಿಲ್ಲೆಗೂ ಮಂತ್ರಿಗಳನ್ನು ಉಸ್ತುವಾರಿಯನ್ನಾಗಿ ಮಾಡಿತ್ತು. ಅನೇಕ ಶಾಸಕರು ಹಾಗೂ ಮುಖಂಡರನ್ನು ಉಸ್ತುವಾರಿಯನ್ನಾಗಿ ನೇಮಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷರು, ಮಾಜಿ ಸಿಎಂ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಸುತ್ತಿದ್ದರು. ಬಿಜೆಪಿಯಲ್ಲಿ ಇರುವುದು 121 ಶಾಸಕರು, ಅದು ಕಾಂಗ್ರೆಸ್ಗಿಂತ ದುಪ್ಪಟ್ಟು. ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದಾಗಿ ಹೇಳಿಕೊಂಡಿತ್ತು. ಅದನ್ನು ಗಮನಿಸಿದಾಗ ಬಿಜೆಪಿ ಸಾಧನೆ ಇನ್ನಷ್ಟು ಹೆಚ್ಚಾಗಬೇಕಾಗಿತ್ತು. ಜೆಡಿಎಸ್ ಸಹ ಅಂತರಂಗದಲ್ಲಿ ಬಿಜೆಪಿಯನ್ನು ಬೆಂಬಲಿಸಿತ್ತು. ಒಂದೆರಡು ಜಿಲ್ಲೆಗಳಲ್ಲಿ ಸ್ಥಳೀಯ ಮುಖಂಡರು ಮಾತ್ರ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರು.
ಕಳೆದ ಬಾರಿಗಿಂತ 5 ಸ್ಥಾನ ಹೆಚ್ಚಾಗಿ ಸಿಕ್ಕಿರುವುದು ತೃಪ್ತಿ ತಂದಿದೆ. ಪಕ್ಷದ ಗ್ರಾ.ಪಂ ಸದಸ್ಯರ ಸಂಖ್ಯೆಯೂ ಹೆಚ್ಚಳವಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮಕೈಗೊ ಳ್ಳುವ ಬಗ್ಗೆ ರ್ಚಚಿಸಿ ತೀರ್ವನಿಸಲಾಗುವುದು. ಬಿಜೆಪಿಗೆ ದಮ್ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಆಗಿ ಅವರ ಸ್ಥಾನ ಉಳಿಸಿಕೊಳ್ಳಲಾಗಿಲ್ಲ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಕಾಂಗ್ರೆಸ್ಗೆ ಸಮಾಧಾನ: ಪ್ರತಿಪಕ್ಷ ಕಾಂಗ್ರೆಸ್ಗೆ ಈ ಚುನಾವಣೆ ಫಲಿತಾಂಶ ಮೂರು ಸ್ಥಾನಗಳನ್ನು ಕಡಿಮೆ ಮಾಡಿದ್ದರೂ ಸಮಾಧಾನವನ್ನಂತೂ ಮೂಡಿಸಿದೆ. ಹಿಂದಿನ ಚುನಾವಣೆಗಳಲ್ಲಿ ಯಾವುದೇ ಪ್ರತಿಪಕ್ಷ ಇಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಿಜೆಪಿಗೆ ಸಮಾನವಾಗಿ ಕಾಂಗ್ರೆಸ್ ಗೆದ್ದಿದೆ. ಕೆಲ ಕಡೆ ಕಡಿಮೆ ಅಂತರದಲ್ಲಿ ಸೋತಿದೆ. ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಇರುವ ಮಂಡ್ಯ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಗೆಲುವು ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ದ್ವಿಸದಸ್ಯ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಹೊರತುಪಡಿಸಿ ಇನ್ನುಳಿದ ಕಡೆ ಮೊದಲ ಸ್ಥಾನದಲ್ಲಿ ಕಾಂಗ್ರೆಸ್ ಇದೆ. ಹಿಂದೆ ಗೆದ್ದಿದ್ದ ಕೆಲವು ಕ್ಷೇತ್ರಗಳಲ್ಲಿ ಸೋತಿದ್ದರೂ ಈಗ ಹೊಸ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ನ ಮೂರು ಕ್ಷೇತ್ರಗಳನ್ನು ಕಿತ್ತುಕೊಂಡಿದೆ. ಕಾಂಗ್ರೆಸ್ನಲ್ಲಿ ಇರುವುದು 69 ಶಾಸಕರು, ಒಬ್ಬ ಸಂಸದರು ಮಾತ್ರ. ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯೆ ಹೆಚ್ಚಿನ ಸ್ಥಾನ ಗೆದ್ದಿರುವುದಾಗಿ ಹೇಳಿಕೊಂಡಿದೆ. ಆದರೂ ಕಾಂಗ್ರೆಸ್ 11 ಸ್ಥಾನ ಗೆದ್ದಿದೆ. ಮುಂದಿನ ಚುನಾವಣೆಗೆ ನಾಡಿಮಿಡಿತದ ಅರಿವಾಗಿದೆ; ಈ ಸಾಧನೆಗೆ ಒಗ್ಗಟ್ಟಿನ ಪ್ರಚಾರ ಹಾಗೂ ಅಭ್ಯರ್ಥಿಗಳ ಆಯ್ಕೆ ಕಾರಣ ಎಂಬುದು ಪಕ್ಷದ ನಾಯಕರ ಅಭಿಪ್ರಾಯ. ಮುಂದಿನ ವಿಧಾನಸಭಾ ಚುನಾವಣೆಯ ತನಕ ಈ ಒಗ್ಗಟ್ಟು ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ.
ಜೆಡಿಎಸ್ಗೆ ದೊಡ್ಡ ನಷ್ಟ: ಜೆಡಿಎಸ್ ಗೆದ್ದಿರುವುದು ಎರಡು ಸ್ಥಾನ ಮಾತ್ರ. ಹಾಸನ ಮತ್ತು ಮೈಸೂರಿನಲ್ಲಿ. ಅದರಲ್ಲೂ ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಎಂಬ ಕಾರಣಕ್ಕಾಗಿ ಗೆಲುವು ಸಾಧಿಸಿದೆ. ಜೆಡಿಎಸ್ ಕಣಕ್ಕೆ ಇಳಿಸಿದ್ದು 6 ಸ್ಥಾನಗಳಿಗೆ ಮಾತ್ರ. ಕಳೆದ ಬಾರಿ 4 ಸ್ಥಾನ ಗೆದ್ದಿತ್ತು. ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿದಂತೆ ಎಡವಟ್ಟು ನಿರ್ಧಾರಗಳೇ ಕಾರಣವಾಗಿವೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಕ್ಷಮುನ್ನಡೆಸುವಲ್ಲಿ ಪದೇಪದೆ ವಿಫಲವಾಗುತ್ತಿರುವುದು ಅವರ ನಿರ್ಧಾರಗಳಿಂದ ಎಂಬುದನ್ನು ಪಕ್ಷದ ಮುಖಂಡರು ಒಪು್ಪತ್ತಾರೆ. ಆದ್ದರಿಂದಲೇ ಒಕ್ಕಲಿಗರ ಪ್ರದೇಶದಲ್ಲಿಯೇ ನೆಲೆ ಕಳೆದುಕೊಂಡಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಅನೇಕ ಮುಖಂಡರು ಪಕ್ಷ ತೊರೆದಿದ್ದಾರೆ. ಮುಂದಿನ ಬಾರಿ ಸ್ವಂತ ಬಲದ ಮೇಲೆ ಸರ್ಕಾರ ರಚನೆಯ ಕನಸು ಕಾಣುತ್ತಿರುವ ಜೆಡಿಎಸ್ ಗೆ ಈ ಫಲಿತಾಂಶ ಸಾಕಷ್ಟು ಪಾಠವನ್ನಂತೂ ಹೇಳಿದೆ. ಆದರೆ ಅದನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಾಗಿದೆ.
ಬಿಜೆಪಿಗೆ 1 ಸ್ಥಾನ ಕೊರತೆ: ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಯಾವುದೇ ಪಕ್ಷ 38 ಸ್ಥಾನ ಪಡೆದಿರಬೇಕು. ಈಗ ಬಿಜೆಪಿ ಬಲ 37 ಸ್ಥಾನಕ್ಕೆ ಏರಿಕೆಯಾಗಿದೆ. ಬಹುಮತಕ್ಕೆ ಒಂದು ಸದಸ್ಯ ಸ್ಥಾನದ ಅವಶ್ಯಕತೆಯಿದೆ.
ಬಿಜೆಪಿ: ಕೊಡಗು ಸುಜಾ ಕುಶಾಲಪ್ಪ, ಬೆಂಗಳೂರು- ಗೋಪಿನಾಥ ರೆಡ್ಡಿ, ಚಿತ್ರದುರ್ಗ- ಕೆ.ಎಸ್. ನವೀನ್, ಉ.ಕನ್ನಡ- ಗಣಪತಿ ಉಳ್ವೇಕರ್, ಬಳ್ಳಾರಿ- ವೈ.ಎಂ.ಸತೀಶ, ಚಿಕ್ಕಮಗಳೂರು-ಎಂ.ಕೆ.ಪ್ರಾಣೇಶ್, ಶಿವಮೊಗ್ಗ-ಡಿ.ಎಸ್.ಅರುಣ್, ಕಲಬುರಗಿ-ಬಿ.ಜಿ.ಪಾಟೀಲ್, ದ.ಕನ್ನಡ (ದ್ವಿಸದಸ್ಯ)- ಕೋಟ ಶ್ರೀನಿವಾಸ ಪೂಜಾರಿ, ಧಾರವಾಡ(ದ್ವಿಸದಸ್ಯ) -ಪ್ರದೀಪ್ ಶೆಟ್ಟರ್, ವಿಜಯಪುರ-ಪಿ.ಎಚ್.ಪೂಜಾರ್
ಕಾಂಗ್ರೆಸ್: ಬೀದರ್-ಭೀಮಾರಾವ್ ಪಾಟೀಲ್, ಮಂಡ್ಯ-ದಿನೇಶ್ ಗೂಳೀಗೌಡ, ರಾಯಚೂರು-ಶರಣಗೌಡ ಬಯ್ಯಾಪುರ, ಬೆಂ.ಗ್ರಾಮಾಂತರ-ಎಸ್.ರವಿ, ತುಮಕೂರá-- ಆರ್.ರಾಜೇಂದ್ರ, ಧಾರವಾಡ(ದ್ವಿಸದಸ್ಯ)- ಸಲೀಂ ಅಹಮದ್, ದಕ್ಷಿಣ ಕನ್ನಡ(ದ್ವಿಸದಸ್ಯ)- ಮಂಜುನಾಥ ಭಂಡಾರಿ, ಬೆಳಗಾವಿ(ದ್ವಿಸದಸ್ಯ)-ಚನ್ನರಾಜ ಹಟ್ಟಿಹೊಳಿ, ವಿಜಯಪುರ(ದ್ವಿಸದಸ್ಯ)- ಸುನೀಲ್ ಗೌಡ ಪಾಟೀಲ್, ಕೋಲಾರ-ಎಂ.ಎಲ್.ಅನಿಲ್ ಕುಮಾರ್, ಮೈಸೂರು (ದ್ವಿಸದಸ್ಯ) ಡಾ. ತಿಮ್ಮಯ್ಯ.
ಜೆಡಿಎಸ್: ಹಾಸನ-ಸೂರಜ್ ರೇವಣ್ಣ, ಮೈಸೂರು- ಮಂಜೇಗೌಡ
ಪಕ್ಷೇತರ: ಬೆಳಗಾವಿ ದ್ವಿಸದಸ್ಯ-ಲಖನ್ ಜಾರಕಿಹೊಳಿ
ಬಿಜೆಪಿ: ಅಧಿಕಾರದಲ್ಲಿದ್ದರೂ ನಿರೀಕ್ಷೆಯ ಗುರಿ ಮುಟ್ಟುವಲ್ಲಿ ವಿಫಲ, ಪಕ್ಷದ ಗಟ್ಟಿ ನೆಲೆ ಇರುವ ಕ್ಷೇತ್ರಗಳಲ್ಲೇ ತಿಣುಕಾಡಿ ಗೆಲುವು, ಸಹೋದರ ರನ್ನೇ ಗೆಲ್ಲಿಸಲಾಗದ ಶಾಸಕರು, ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನಕ್ಕೂ ಹಿನ್ನಡೆ
ಕಾಂಗ್ರೆಸ್:· ಕಳೆದ ಸಲಕ್ಕಿಂತ ಕಡಿಮೆ ಸ್ಥಾನ ಗೆದ್ದರೂ ಸಮಾ ಧಾನ, ಬಿಜೆಪಿಗೆ ಸರಿಸಮನಾಗಿ 11 ಸ್ಥಾನ ಗೆದ್ದ ತೃಪ್ತಿ; ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸಾಧನೆ; ಮುಂದಿನ ವಿಧಾನಸಭೆ ಚುನಾವಣೆಗೆ ಉತ್ಸಾಹ
ಜೆಡಿಎಸ್: ಪಕ್ಷ ಮುನ್ನಡೆಸುವಲ್ಲಿ ಎಚ್ಡಿಕೆ ವೈಫಲ್ಯ ಮತ್ತೆ ಸಾಬೀತು, ಒಕ್ಕಲಿಗರ ಕ್ಷೇತ್ರದಲ್ಲಿಯೇ ನೆಲೆ ಕಳೆದುಕೊಂಡ ಕಹಿ, ಪಕ್ಷ ತೊರೆಯುವವರ ನಡುವೆ ಮತ್ತೊಂದು ಆಘಾತ, ವಿಧಾನಸಭೆ ಚುನಾವಣೆ ಗೆಲ್ಲುವ ಆಶಯಕ್ಕೆ ಹಿನ್ನಡೆ