ಕಾರ್ಪೋರೇಟ್ ಟ್ಯಾಕೀಸ್ ಕಾರ್ಯಕ್ರಮವನ್ನು ಎ.ಎನ್.ರಾಮಚಂದ್ರ ಉದ್ಘಾಟಿಸಿದರು. ಡಾ. ಎನ್.ಕೆ.ಚಿದಾನಂದ, ಡಾ. ಬಿ.ಎಸ್.ಶಿವಪ್ರಸಾದ್ ಇದ್ದರು.  
ನ್ಯೂಸ್

ವಾಣಿಜ್ಯ ದೃಷ್ಟಿಕೋನದ ವಿಶ್ಲೇಷಣೆ ಶ್ಲಾಘನೀಯ

ಶಿವಮೊಗ್ಗ: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಾಣಿಜ್ಯೋದ್ಯಮದ ಹಿನ್ನೆಲೆಯಲ್ಲಿ ಸಿನಿಮಾದ ಪ್ರಾಮುಖ್ಯತೆ ಅರಿಯಬೇಕೆಂದು ಎನ್‌ಇಎಸ್ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಹೇಳಿದರು.

ನಗರದ ಎನ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಿನಿಮಾಗಳ ವಾಣಿಜ್ಯೋದ್ಯಮ ವಿಶ್ಲೇಷಣೆ ಸ್ಪರ್ಧೆ ಕಾರ್ಪೋರೇಟ್ ಟ್ಯಾಕೀಸ್ ಕಾರ್ಯಕ್ರಮವನ್ನು ಕ್ಲಾಪ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾವನ್ನು ಮನರಂಜನೆಗಾಗಿ ವೀಕ್ಷಿಸದೆ ಕಾಮರ್ಸ್ ವಿದ್ಯಾರ್ಥಿಗಳು ವಾಣಿಜ್ಯದ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಪ್ರಯತ್ನ ಶ್ಲಾಘನೀಯ. ಅಂತಹ ವಿಶ್ಲೇಷಣಾತ್ಮಕ ಚಿಂತನೆಗಳು ಸಿಗುವುದೇ ಪುಸ್ತಕಗಳ ಅಧ್ಯಯನದಿಂದ. ಪುಸ್ತಕ ನಮಗೆ ವಾಸ್ತವ ಜ್ಞಾನವನ್ನು ನೀಡುತ್ತದೆ ಎಂದರು.
ಹೊಸತನದ ಚಿಂತನೆ ಮನುಷ್ಯನ ಸಹಜ ಗುಣ. ಅಂತಹ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳುವಂತಹ ಯಾವುದೇ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿರ್ವಹಣಾ ಕೌಶಲ ವಿದ್ಯಾರ್ಥಿಗಳದ್ದಾಗಲಿ ಎಂದು ಹೇಳಿದರು.
ರಂಗಕರ್ಮಿ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಕೆ.ಚಿದಾನಂದ ಮಾತನಾಡಿ, ನಾಟ್ಯದಿಂದ ನಾಟಕದ ಅನಾವರಣವಾಯಿತು ಎಂಬ ಮಾತಿದೆ. ಭಾರತೀಯ ಸಂಸ್ಕೃತಿಯಲ್ಲಿ ಒಂದು ನಿರ್ದಿಷ್ಟತೆ ಮೀರಿ ಕಲೆ ಮತ್ತು ಸಂಗೀತದ ಮೂಲಕ ಜನಸಾಮಾನ್ಯರಲ್ಲಿ ಅಕ್ಷರಗಳನ್ನು ಬಿತ್ತುವ ಕೆಲಸ ಮಾಡಲಾಯಿತು ಎಂದರು.
ಭಾರತೀಯ ಸಿನಿಮಾಗಳಲ್ಲಿ ಹೆಚ್ಚಿನ ಆದ್ಯತೆಯನ್ನು ಚಿತ್ರೀಕರಣಕ್ಕಾಗಿ ನೀಡಲಾಗುತ್ತಿದೆ. ಅನೇಕ ಸಂದರ್ಭದಲ್ಲಿ ನಿರ್ದಿಷ್ಟ ನಟರ ಆಧಾರದ ಮೇಲೆ ಸಿನಿಮಾವನ್ನು ವಿನ್ಯಾಸಗೊಳಿಸಲಾಗುತ್ತದೆ. ಸಿನಿಮಾದ ಏಳುಬೀಳುಗಳು ವಿನ್ಯಾಸದ ಮೇಲೆ ನಿಂತಿದೆ. ನಾವು ಮಾಡುವ ವಿಶ್ಲೇಷಣೆಗಳು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬೇಕು. ಈ ಮೂಲಕ ನಮ್ಮ ಆಲೋಚನೆಗಳಲ್ಲಿ ಚಲನಶೀಲತೆಯನ್ನು ರೂಢಿಸಿಕೊಳ್ಳುವುದು ಅತ್ಯವಶ್ಯ ಎಂದು ಹೇಳಿದರು. ಪ್ರಾಚಾರ್ಯ ಡಾ. ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.