‘ಮಾದಕ ವಸ್ತು ದಂಧೆ ನಿಯಂತ್ರಣ ಹಾಗೂ ಪೆಡ್ಲರ್ಗಳ ವಿರುದ್ಧ ಕ್ರಮಕ್ಕೆ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಆಂಟಿ ಡ್ರಗ್ಸ್ ಸಮಿತಿ ರಚನೆಗೆ ಸೂಚಿಸಲಾಗಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಘೋಷಿಸಿದ್ದಾರೆ. ಗುರುವಾರ ನಡೆದ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದಲ್ಲಿ ಪಾಲ್ಗೊಂಡು, ಡ್ರಗ್ಸ್ ದಂಧೆಯನ್ನು ಸಂಪೂರ್ಣ ಕಿತ್ತುಹಾಕಲು ಯುವಕರ ಹಾಗೂ ಜನಸಾಮಾನ್ಯರ ಸಹಕಾರ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಮಾದಕ ದ್ರವ್ಯ ಜಾಲಗಳನ್ನು ಮಟ್ಟ ಹಾಕಲು ಸಾಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮಾದರಿಯಲ್ಲಿ ರಾಜ್ಯದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎಎನ್ಟಿಎಫ್) ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮಾದಕ ದ್ರವ್ಯ ಜಾಲಗಳ ವಿರುದ್ಧ ಹೋರಾಡಲು ಇಂಥ ಕ್ರಮಗಳ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದ್ದು, ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಿದೆ. ಪೊಲೀಸ್ ಇಲಾಖೆ ಕೆಳಹಂತದ ಸಿಬ್ಬಂದಿಯನ್ನು ಹದ್ದುಬಸ್ತಿನಲ್ಲಿಟ್ಟು, ಮಾದಕ ದ್ರವ್ಯ ಜಾಲದ ಮೇಲೆ ಸೂಕ್ಷ್ಮ ನಿಗಾ ಇರಿಸಬೇಕಿದೆ.
ಡ್ರಗ್ಸ್ ಹಾವಳಿ ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಇದರ ಪಿಡುಗು ಮೇರೆ ಮೀರಿದೆ. ನೈಜೀರಿಯಾ ಸೇರಿ ಆಫ್ರಿಕಾ ಖಂಡದ ಹಲವು ಪ್ರಜೆಗಳು ರಾಜ್ಯದ ವಿವಿಧೆಡೆ ಸಕ್ರಿಯವಾಗಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ಬಾಣಸವಾಡಿ, ಕಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಆಫ್ರಿಕನ್ ಪ್ರಜೆಗಳು ಮನೆಯಲ್ಲೇ ಸಿಂಥೆಟಿಕ್ ಡ್ರಗ್ಸ್ ತಯಾರಿಸುವ ಪ್ರಕರಣಗಳು ಈ ಹಿಂದೆಯೇ ವರದಿಯಾಗಿವೆ.
ಅಲ್ಲದೆ, ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್ಸ್ ಮಿಶ್ರಿತ ಚಾಕೋಲೇಟ್, ಮಾತ್ರೆಗಳು, ಸಿಹಿ ಪದಾರ್ಥಗಳು ವ್ಯಸನಿಗಳಿಗೆ ಸುಲಭದಲ್ಲಿ ಸಿಗುತ್ತಿವೆ. ಅಂದರೆ, ಪೆಡ್ಲರ್ಗಳು ಮತ್ತು ಇವರ ಹಿಂದಿರುವ ದುಷ್ಟಶಕ್ತಿಗಳು ಎಷ್ಟು ವ್ಯವಸ್ಥಿತವಾಗಿ ಇಂಥ ಕೃತ್ಯದಲ್ಲಿ ತೊಡಗಿವೆ ಎಂಬುದನ್ನು ಅವಲೋಕಿಸಿದರೆ ನಿಜಕ್ಕೂ ಆತಂಕವಾಗುತ್ತದೆ. ಮಾದಕ ದ್ರವ್ಯ ಜಾಲ ನೂರಾರು ಕೋಟಿ ರೂ.ಗಳ ವಹಿವಾಟು ಹೊಂದಿದೆ. ಹಾಗಾಗಿ, ಇದರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸಿ, ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕಿದೆ.
ಕರ್ನಾಟಕದಲ್ಲಿನ ಮಾದಕವಸ್ತುಗಳ ಜಾಲದಲ್ಲಿ ಶೇಕಡ 40ರಷ್ಟು ವಿದೇಶಿಯರ ಪಾತ್ರ ಇದೆ. ಹೊಸಹೊಸ ಮಾರ್ಗಗಳಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದೆ. ಕಾನೂನುಬಾಹಿರ ಕೃತ್ಯಗಳಿಗೆ ಬಳಸುವ ಡಾರ್ಕ್ವೆಬ್ಸೈಟ್ ಮೂಲಕ ವಿದೇಶಗಳಿಂದ ಮಾದಕ ವಸ್ತು ಭಾರತಕ್ಕೆ ಆಮದಾಗುತ್ತಿದೆ. ಡ್ರಗ್ಸ್ ಕಳ್ಳಸಾಗಾಣಿಕೆ ಮತ್ತು ಮಾರಾಟ ವ್ಯಾಪಕವಾಗಿ ಹೆಚ್ಚಿದ್ದು, ವಿದ್ಯಾರ್ಥಿಗಳನ್ನು ವ್ಯಸನಿಗಳಾಗಿ ಮಾಡಲಾಗುತ್ತಿದೆ. ಯುವಜನರು ಒಮ್ಮೆ ಇಂಥ ಚಟಕ್ಕೆ ದಾಸರಾದರೆ ಬಿಡುವುದು ಕಷ್ಟ ಹಾಗೂ ಅದರಿಂದ ಕೌಟುಂಬಿಕ, ಸಾಮಾಜಿಕವಾಗಿ ಅನೇಕ ಬಗೆಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಆರಂಭದಲ್ಲೇ ಈ ಪಿಡುಗನ್ನು ನಿಯಂತ್ರಿಸಬೇಕಾದುದು ಅನಿವಾರ್ಯ.