ನ್ಯೂಸ್

ಎಬಿವಿಪಿ ವಿದ್ಯಾರ್ಥಿಗಳಿಗೋಸ್ಕರ ಸ್ಥಾಪಿತವಾದ ಸಂಸ್ಥೆ

ಎಂ.ರವಿ

ಹುಣಸೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ಮತ್ತು ವಿದ್ಯಾರ್ಥಿಗಳಿಗೋಸ್ಕರ ಸ್ಥಾಪನೆಯಾದ ಸಂಸ್ಥೆಯಾಗಿದೆ ಎಂದು ಎಬಿವಿಪಿ ರಾಜ್ಯ ಕಾರ್ಯಕಾರಣಿಕ ಸದಸ್ಯ ಶ್ರೀದತ್ತ ತಿಳಿಸಿದರು.

ನಗರದ ವಿಕ್ರಂ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಗುರುವಾರ 77ನೇ ಎಬಿವಿಪಿ ಸಂಸ್ಥಾಪನಾ ದಿನ ಮತ್ತು ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿ, 1949ರಲ್ಲಿ ಸ್ಥಾಪನೆಗೊಂಡ ಪರಿಷತ್ ಇಂದಿನವರೆವಿಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಜಾತಿ, ಮತ, ಪಂಥಗಳನ್ನು ಮೀರಿ ದುಡಿಯುತ್ತಿದೆ. ವಿಶ್ವದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಯುವಕರನ್ನು ಸರಿದಾರಿಗೆ ತರುವ, ಸಮುದಾಯದ ಆಸ್ತಿಯನ್ನಾಗಿಸುವ ಮತ್ತು ಎಲ್ಲಕ್ಕಿಂದ ಮುಖ್ಯವಾಗಿ ಯುವ ಸಮೂಹದಲ್ಲಿ ರಾಷ್ಟ್ರಭಕ್ತಿ, ದೇಶ ಪ್ರೇಮವನ್ನು ರೂಪಿಸುವ ಮಹತ್ಕಾರ್ಯವನ್ನು ಎಬಿವಿಪಿ ನಡೆಸುತ್ತಿದೆ ಎಂದರು.

ಸಂಸ್ಥಾಪನಾ ದಿನದ ಸ್ಮರಣಾರ್ಥ ಕಾಲೇಜು ಆವರಣದಲಿ ಸಸಿಗಳನ್ನು ನೆಡಲಾಯಿತು. ಪ್ರಾಂಶುಪಾಲ ಋಷಿ ಸೇರಿದಂತೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.