ಬೆಂಗಳೂರು: ಬೀದಿ ಬದಿಯಲ್ಲಿ ಸೊಪ್ಪು, ತರಕಾರಿ ಮಾರಾಟ ಮಾಡುತ್ತಿದ್ದ ವೃದ್ಧೆಯ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಪ್ರಕರಣ ಶನಿವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜಯನಗರ 9ನೇ ಬ್ಲಾಕ್‌ನ ನಿವಾಸಿ ಚಂದ್ರಮ್ಮ(60) ಗಾಯಗೊಂಡವರು. ಜು.1ರ ಸಂಜೆ 6.45 ಸಮಯದಲ್ಲಿ ಜಯನಗರದ 9ನೇ ಬ್ಲಾಕ್ 26ನೇ ಮುಖ್ಯರಸ್ತೆ, 41 ಕ್ರಾಸ್‌ನಲ್ಲಿರುವ ಬಾಲಾಜಿ ಮೆಡಿಕಲ್ ಶಾಪ್ ಬಳಿ ಈ ನಡೆದಿದೆ. ಘಟನೆಯಲ್ಲಿ ಚಂದ್ರಮ್ಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಂದ್ರಮ್ಮನ ಮೊಮ್ಮಗ ಲಕ್ಷ್ಮಣ ಎಂಬಾತ ಯುವತಿಯೊಂದಿಗೆ ಜತೆ ಓಡಿ ಹೋಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವತಿಯ ಸಹೋದರ ವಸಂತ್ ಕುಮಾರ್ ಮತ್ತೊಬ್ಬ ಯುವಕನ ಜತೆ ದ್ವಿಚಕ್ರ ವಾಹನದಲ್ಲಿ ಆಗಮಿಸಿ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಚಂದ್ರಮ್ಮ ಅವರ ತಲೆಯ ಎಡಭಾಗಕ್ಕೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ತೀವ್ರಗಾಯಗೊಂಡು ಕುಸಿದು ಬಿದ್ದ ಚಂದ್ರಮ್ಮನನನ್ನು ತರಕಾರಿ ಮರಾಟ ಮಾಡುವ ಕುಮಾರ್ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.