ನ್ಯೂಸ್

ವಾರಸುದಾರರಿಲ್ಲದ ಅನಾಥ ಶವಗಳ ಮಾರಾಟ: ಸರ್ಕಾರಿ ಆಸ್ಪತ್ರೆಗಳ ವಿರುದ್ಧ ತನಿಖೆ ನಡೆಸಲು ಆಗ್ರಹ

ಬೆಂಗಳೂರು: ಮೆಡಿಕಲ್ ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆಗಳ ವಿರುದ್ಧ ಶವಗಳ ಮಾರಾಟ ಮಾಡಿರುವ ಆರೋಪ ಕೇಳಿಬರುತ್ತಿದೆ. ಅನಾಥ ಶವ ಮಾರಾಟ ಮಾಡಿ ದುಡ್ಡು ಮಾಡುತ್ತಿರುವ ಬಗ್ಗೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್ಆರ್ ರಮೇಶ್ ದೂರಿದ್ದಾರೆ.

ಅಷ್ಟೇ ಅಲ್ಲ, ಶವಗಳ ಅಂಗಾಂಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆಯೂ ತನಿಖಾ ತಂಡ ರಚನೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪತ್ರ ಬರೆಯಲಾಗಿದೆ. ವಿಕ್ಟೋರಿಯಾ ಆಸ್ಪತ್ರೆ, ಕೆ. ಸಿ. ಜನರಲ್ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆಗಳು ಸೇರಿದಂತೆ ಹಲವು ಆಸ್ಪತ್ರೆಗಳ ವಿರುದ್ಧ ಆರೋಪ ಮಾಡಲಾಗಿದೆ.

ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಶಾಮೀಲಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ವಾರಸುದಾರರಿಲ್ಲದ ಶವಗಳ ಅಂಗಾಂಗ ಮಾರಾಟ ಮಾಡಲಾಗುತ್ತಿದ್ದು, ನಂತರ ಅನಾಥ ಶವಗಳನ್ನು ಉಚಿತವಾಗಿ ಸಂಸ್ಕಾರ ಮಾಡುತ್ತಿದ್ದೇವೆ ಅಂತ ದುಡ್ಡು ಮಾಡಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವ ದಂಧೆಯ ಬಗ್ಗೆ ತನಿಖೆಗೆ ಒತ್ತಾಯಿಸಲಾಗಿದ್ದು, ಅನಾಥ ರೋಗಿಗಳು ಮತ್ತು ಶವಗಳ ಪರಿಶೀಲನಾ ಸಮಿತಿ ರಚಿಸುವ ಸಂಬಂಧ ಸೂಕ್ತ ಕ್ರಮಕ್ಕೆ ರಮೇಶ್ ಒತ್ತಾಯಿಸಿದ್ದಾರೆ.