ನವದೆಹಲಿ: ಪದವಿ ಮತ್ತು ಸ್ನಾತಕೋತ್ತರ ಪದವಿ, ಪಿಎಚ್.ಡಿ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರುವ ಹೊಸ ನಿಯಮಗಳನ್ನು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ರೂಪಿಸಿದ್ದು, ಅಧಿಕೃತವಾಗಿ ಬಿಡುಗಡೆಯಾಗಬೇಕಷ್ಟೆ. ಹೊಸ ನಿಯಮದಲ್ಲಿ ಪದವಿ ಕೋರ್ಸ್ ನಾಲ್ಕು ವರ್ಷದ್ದಾಗಲಿದೆ (ಎಫ್ವೈಯುಪಿ). ಹಾಗೆಯೇ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿಗೆ ಸಂಬಂಧಿಸಿದ ನಿಯಮದಲ್ಲೂ ಬದಲಾವಣೆಯಾಗಲಿದೆ.
ಪದವಿ ಹಂತದಲ್ಲಿ ಆಯ್ಕೆ ಆಧಾರಿತ ಕ್ರೆಡಿಟ್ ಸಿಸ್ಟಂ (ಸಿಬಿಸಿಎಸ್)ನ 160 ಕ್ರೆಡಿಟ್ಗಳು ಮೂರು ವರ್ಷದ ಬದಲಿಗೆ ನಾಲ್ಕು ವರ್ಷದ್ದಾಗಲಿವೆ. ಈ ವ್ಯವಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿ ಕಲಿಕೆಯು ಒಂದು ವರ್ಷದ್ದಾಗಿರುತ್ತದೆ. ಮೂರು ವರ್ಷದ ಪದವಿ ಕಲಿತು ಎರಡು ವರ್ಷದ ಸ್ನಾತಕೋತ್ತರ ಪದವಿ ಆಯ್ಕೆ ಮಾಡಿಕೊಂಡವರಿಗೆ ಕಡೆಯ ವರ್ಷದ ವ್ಯಾಸಂಗವು ಸಂಶೋಧನೆಗೆ ಮೀಸಲಾಗಿರುತ್ತದೆ. ಎಫ್ವೈಯುಪಿ ಕಲಿತವರು ನೇರವಾಗಿ ಪಿಎಚ್.ಡಿ ಕೋರ್ಸ್ಗೂ ಪ್ರವೇಶ ಪಡೆಯಬಹುದು ಎಂದು ಯುಜಿಸಿ ಮೂಲಗಳು ತಿಳಿಸಿವೆ.
ಮೂರು ಅಥವಾ ನಾಲ್ಕು ವರ್ಷ ಪದವಿ ಕೋರ್ಸ್ಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಲಾಗಿದೆ. ಆಯ್ಕೆ ಮಾಡಿಕೊಂಡ ನಂತರವೂ ಅದನ್ನು ಬಿಡುವ ಮತ್ತು ಮರುಸೇರ್ಪಡೆಗೊಳ್ಳುವ ಅವಕಾಶವನ್ನೂ ನೀಡಲಾಗಿದೆ. ಇದರಿಂದ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಕೋರ್ಸ್ ಅವಧಿಯನ್ನು ಅನುಕೂಲಕ್ಕೆ ತಕ್ಕಂತೆ ಹಿಗ್ಗಿಸಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಎಫ್ವೈಯುಪಿ ವಿದ್ಯಾರ್ಥಿಗಳು ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಸುಗಮವಾಗಿ ವರ್ಗಾವಣೆ ತೆಗೆದುಕೊಳ್ಳಬಹುದು. ಇದನ್ನು ಪರ್ಯಾಯ ಮಾರ್ಗದ ಕಲಿಕೆಯನ್ನಾಗಿಯೂ (ಒಡಿಎಲ್, ಆನ್ಲೈನ್, ಹೈಬ್ರಿಡ್) ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಸೆಮಿಸ್ಟರ್ ಪದ್ಧತಿ: ಎಫ್ವೈಯುಪಿಯು ಸೆಮಿಸ್ಟರ್ ಪದ್ಧತಿಯದ್ದಾಗಿದ್ದು, ಒಂದರಿಂದ ಮೂರನೇ ಸೆಮಿಸ್ಟರ್ವರೆಗಿನ ಕಲಿಕೆಯಲ್ಲಿ ಎಲ್ಲ ಪ್ರಮುಖ ವಿಷಯಗಳಲ್ಲಿ ಪ್ರಗತಿಗೆ ಮತ್ತು ಅರ್ಥೈಸಿಕೊಳ್ಳುವಿಕೆಗೆ ಹೆಚ್ಚಿನ ಒತ್ತು ಇರಲಿದೆ. ಅಂದರೆ, ನೈಸರ್ಗಿಕ ವಿಜ್ಞಾನ, ಸಾಮಾಜಿಕ ವಿಜ್ಞಾನ, ಮಾನವೀಯ ಕೋರ್ಸ್ಗಳು, ಗಣಿತ ಮತ್ತು ಸ್ಪರ್ಧಾತ್ಮಕ ಚಿಂತನೆಗಳು ಇದರಲ್ಲಿ ಇರಲಿವೆ. ನಾಲ್ಕರಿಂದ ಆರನೇ ಸೆಮಿಸ್ಟರ್ನಲ್ಲಿ ಶಿಸ್ತೀಯ ಅಥವಾ ಅಂತರ ಶಿಸ್ತೀಯ ವಿಷಯಗಳನ್ನು ವಿಶೇಷ ವ್ಯಾಸಂಗಕ್ಕೆ (ಮೇಜರ್ ಮತ್ತು ಮೈನರ್) ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಕಡೆಯ ಎರಡು ಸೆಮಿಸ್ಟರ್ಗಳು ಸಂಶೋಧನಾ ಕಾರ್ಯಕ್ಕೆ ಮೀಸಲಾದ ಕಲಿಕೆಯದ್ದಾಗಿರಲಿದೆ.