ನ್ಯೂಸ್

ಕೊರೊನಾ ವೈರಸ್​ ಪೀಡಿತ ಚೀನಾದಿಂದ ಭಾರತಕ್ಕೆ ಬಂದು ದಾಂಪತ್ಯಕ್ಕೆ ಕಾಲಿಟ್ಟ ಯುವತಿ

ಭೋಪಾಲ್​: ಕೊನೊರಾ ವೈರಸ್​ನ ದಾಳಿಗೆ ತತ್ತರಿಸಿರುವ ಚೀನಾದಿಂದ ಯುವತಿಯೊಬ್ಬಳು ಭಾರತಕ್ಕೆ ಬಂದು ತನ್ನ ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ಮದ್ಯಪ್ರದೇಶದ ಮಾಂಡ್ಸೌರ್​ನಲ್ಲಿ ನಡೆದಿದೆ. ಸತ್ಯಾರ್ಥ್​ ಮಿಶ್ರಾ ಮತ್ತು ಜಿ ಹಾವೋ ಐದು ವರ್ಷಗಳಿಂದ ಪ್ರೀತಿಸುತ್ತಿದ್ದು ತಂದೆ ತಾಯಿಯರ ಆಶೀರ್ವಾದದೊಂದಿಗೆ ಇಂದು ಮದುವೆಯಾಗಿದ್ದಾರೆ.

ಮಾಂಡ್ಸೌರ್​ನ ಸತ್ಯಾರ್ಥ್​ ಮಿಶ್ರಾ ಕೆನಡಾದ ಶೆರಿಡಾನ್​ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಚೀನಾ ಮೂಲದ ಜಿ ಹಾವೋ ಜತೆ ಸ್ನೇಹ ಬೆಳೆದಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು. 2016ರಲ್ಲಿ ಸತ್ಯಾರ್ಥ್​ ತನ್ನ ಮನೆಯಲ್ಲಿ ತಮ್ಮ ಪ್ರೀತಿಯ ವಿಷಯ ತಿಳಿಸಿ ಮದುವೆಗೆ ಒಪ್ಪಿಸಿದ್ದರು. ಎರಡೂ ಕುಟುಂಬಗಳ ಮದುವೆಗೆ ಒಪ್ಪಿದ್ದು, ಇಂದು (ಫೆ.2) ಮಾಂಡ್ಸೌರ್​ನಲ್ಲಿ ಭಾರತೀಯ ಸಂಪ್ರದಾಯದಂತೆ ಪ್ರೇಮ ಪಕ್ಷಿಗಳು ಹಸೆಮಣೆ ಏರಿದ್ದಾರೆ. ಜಿ ಹಾವೋ ತಂದೆ ತಾಯಿ 29ನೇ ತಾರೀಖಿನಂದು ಭಾರತಕ್ಕೆ ಬಂದಿದ್ದು ಮದುವೆಯಲ್ಲಿ ವಧು ವರರಿಗೆ ಆಶೀರ್ವದಿಸಿದ್ದಾರೆ.

ಈ ಮೊದಲು ಮದುವೆಯ ನಂತರ ಚೀನಾದಲ್ಲಿ ಅಲ್ಲಿನ ಸಂಪ್ರದಾಯದಂತೆ ಆರತಕ್ಷತೆಯನ್ನು ನಡೆಸಬೇಕು ಎಂದು ತೀರ್ಮಾನಿಸಲಾಗಿತ್ತಂತೆ. ಆದರೆ ಚೀನಾದಲ್ಲಿ ಕಾಡುತ್ತಿರುವ ಕೊರೊನಾ ವೈರಸ್​ನಿಂದಾಗಿ ಅಲ್ಲಿನ ಆರತಕ್ಷತೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ತಮ್ಮ ಪ್ರೇಮ ಕಥೆಯ ಬಗ್ಗೆ ಮಾತನಾಡಿರುವ ಜಿ ಹಾವೋ, "ಭಾರತ ವರ್ಣಮಯ ದೇಶ. ಚೀನಾ ಮತ್ತು ಭಾರತ ಎರಡೂ ದೇಶಗಳು ಸಂಪ್ರದಾಯ ಬದ್ಧ ದೇಶಗಳಾಗಿವೆ. ನನಗೆ ಇಷ್ಟವಾದ ದೇಶ ಭಾರತವಾದ್ದರಿಂದ ಸತ್ಯಾರ್ಥ ಜತೆ ಪ್ರೇಮವಾಯಿತು" ಎಂದು ಹೇಳಿದ್ದಾರೆ.

ವಧುವಿನ ಕುಟುಂಬ ಭಾರತಕ್ಕೆ ತಮ್ಮ ಮಗಳನ್ನು ಸೊಸೆಯಾಗಿ ಕೊಟ್ಟಿದ್ದು, ಬಹಳಷ್ಟು ಸಂತೋಷದಿಂದ ಇಲ್ಲಿನ ಪ್ರತಿ ಶಾಸ್ತ್ರಗಳಲ್ಲೂ ತೊಡಗಿಕೊಂಡಿದ್ದಾರೆ ಎಂದು ವರನ ತಾಯಿ ಜ್ಯೋತಿ ತಿಳಿಸಿದ್ದಾರೆ. (ಏಜೆನ್ಸೀಸ್​)