ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ ಪಂಡಿತ್ ಪ್ರಸನ್ನ ಗುಡಿ ಅವರನ್ನು ಚಾತುರ್ಮಾಸ್ಯ ವ್ಯವಸ್ಥಾಪನಾ ಸಮಿತಿಯಿಂದ ಗೌರವಿಸಲಾಯಿತು. 
ನ್ಯೂಸ್

ಭಕ್ತರಿಗಾಗಿ ಭೂಮಿ ಮೇಲೆ ಶ್ರೀಕೃಷ್ಣನ ಅವತಾರ

ಶಿವಮೊಗ್ಗ: ಸಕಲ ಭಕ್ತರ ಉದ್ಧಾರಕ್ಕಾಗಿಯೇ ಶ್ರೀಕೃಷ್ಣ ಭೂಮಿಯಲ್ಲಿ ಅವತರಿಸಿದ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನ ಶ್ರೀ ಸತ್ಯಧರ್ಮ ಮಠದಲ್ಲಿ ನಡೆಯುತ್ತಿರುವ 28ನೇ ಚಾತುರ್ಮಾಸ್ಯದ ವಿದ್ವತ್ ಸಭೆಯಲ್ಲಿ ಶನಿವಾರ ದಶಮಸ್ಕಂದ ಭಾಗವತ ಕುರಿತು ಪ್ರವಚನ ನೀಡಿದ ಶ್ರೀಗಳು, ದೇವರ ಅವತಾರದ ಸಂದರ್ಭದಲ್ಲಿ ಅವರ ಸ್ತೋತ್ರ ಮಾಡಬೇಕಾಗಿರುವುದು ಭಕ್ತರ ಕರ್ತವ್ಯ. ಹೀಗಾಗಿ ಬ್ರಹ್ಮ ಮತ್ತು ರುದ್ರಾದಿ ದೇವತೆಗಳು ಗರ್ಭಸ್ತುತಿ ಮಾಡಿದ್ದಾರೆ. ಆ ಮೂಲಕ ಭಗವಂತನ ಸರ್ವೋತ್ತಮತ್ವವನ್ನು ನಮಗೆ ತಿಳಿಸುತ್ತಿದ್ದಾರೆ ಎಂದರು.
ಒಂದು ಸಿಹಿ ತಿನಿಸು ಕೊಡುವುದರಿಂದ ಒಬ್ಬರಿಗೆ ಆಗುವ ಸಂತೋಷ ಮತ್ತು ಲಾಭ ಅತ್ಯಂತ ಸಣ್ಣದು. ಆದರೂ ಅದು ತತ್ಕಾಲದ ಸಂತೋಷ ನೀಡುತ್ತದೆ. ತಾತ್ಕಾಲಿಕ ಉಪಕಾರವೇ ಒಂದು ಸ್ಮರಣೀಯ ಉಪಕಾರ ಅಂತಾದ್ರೆ ಜ್ಞಾನವನ್ನು ನೀಡುವ ಜ್ಞಾನದ ಉಪಕಾರ ಮೋಕ್ಷದವರೆಗೂ ಮತ್ತು ಮೋಕ್ಷದಲ್ಲೂ ಇರುವ ಉಪಕಾರ ಅನಂತ ಕಾಲದವರೆಗೂ ಜ್ಞಾನವನ್ನು ನೀಡುತ್ತದೆ ಎಂದು ತಿಳಿಸಿದರು.
ಲೌಕಿಕ ಲಾಭ ಕೊಡುವ ಯೋಚನೆಗಳು ತಪ್ಪಲ್ಲ. ಬದುಕಿಗಾಗಿ ಹೊಟ್ಟೆ, ಬಟ್ಟೆ ಇವೆಲ್ಲದರ ಅವಶ್ಯಕತೆ ಇದ್ದೇ ಇದೆ. ಆದರೆ ಇದೇ ನಿಜವಾದ ಉಪಕಾರವಲ್ಲ. ತತ್ವಜ್ಞಾನವನ್ನು ಕೊಡುವ ಉಪಕಾರ ಎಲ್ಲಕ್ಕಿಂತ ದೊಡ್ಡದು. ಪಾಲಕರು ಮಕ್ಕಳಿಗೆ ಈ ಜ್ಞಾನದ ಉಪಕಾರ ಮಾಡಬೇಕು ಎಂದು ತಿಳಿಸಿದರು.
ಪಂಡಿತ ಅಭಯಾಚಾರ್ಯ ಪಾಟೀಲ್ ಪ್ರವಚನ ನೀಡಿದರು. ಉತ್ತರಾದಿ ಮಠದ ದಿವಾನ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಮೊದಲಾದವರಿದ್ದರು.

ಗಮನ ಸೆಳೆದ ಮಹಿಳಾ ಗೋಷ್ಠಿ
ಚಾತುರ್ಮಾಸ್ಯ ನಿಮಿತ್ತ ಭಾನುವಾರ ಸಂಜೆ ಶ್ರೀ ಜಯವರ್ಯ ಸಭಾಮಂಟಪದಲ್ಲಿ ಮಹಿಳಾ ಗೋಷ್ಠಿ ನಡೆಯಿತು. ಶ್ರೀಪಾದಂಗಳವರ ಪೂರ್ವಾಶ್ರಮದ ಮಾತೃಶ್ರೀ ರುಕ್ಮಿಣೀಬಾಯಿ ಗುತ್ತಲ ಅಧ್ಯಕ್ಷತೆ ವಹಿಸಿದ್ದರು. ದಾಸ ಸಾಹಿತ್ಯಕ್ಕೆ ಮಹಿಳೆಯ ಕೊಡುಗೆ ಕುರಿತು ಅಂಭೃಣೀ ಜೋಷಿ, ನಿತ್ಯಕರ್ಮಗಳಲ್ಲಿ ಹರಿಪೂಜೆ ಕುರಿತು ಮೇಧಾ ಜೋಷಿ ಮತ್ತು ಮಹಾಭಾರತದ ಆದರ್ಶ ಮಹಿಳೆಯರು ಕುರಿತು ಜಾಹ್ನವಿ ಉಮರ್ಜಿ ಮಾತನಾಡಿದರು. ಚಂದ್ರಿಕಾ ಮತ್ತು ವೀಣಾ ವಾಸುಕಿ ಕಾರ್ಯಕ್ರಮ ನಿರ್ವಹಿಸಿದರು. ನೂರಾರು ಮಹಿಳೆಯರು ಭಾಗವಹಿಸಿದ್ದರು.