ಬೆಂಗಳೂರು: ಡಾ.ಅಂಬೇಡ್ಕರ್ ಅವರು ಬಯಸಿದಂತಹ ಸಮಾಜ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ(An honest effort to build the society that Ambedkar wanted) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ತಿಳಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಪೂರ್ವ ದ್ವಾರದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಅಂಬೇಡ್ಕರ್ ಕೇವಲ ದಲಿತರ ನಾಯಕರಾಗಿರದೇ ಸಮಾಜದಲ್ಲಿ ಶೋಷಿತರು, ದುರ್ಬಲರು ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಅನ್ಯಾಯದಿಂದ ಮುಕ್ತಿ ಪಡೆಯಬೇಕೆಂದು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಅಂಬೇಡ್ಕರ್ ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಿಸಲು ಶ್ರಮಿಸಿದವರು ಎಂದರು.
ದೇಶದ ಕೆಲವೇ ಮೇಧಾವಿಗಳಲ್ಲಿ ಅವರೂ ಒಬ್ಬರು. ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ. ಎಲ್ಲರೂ ಮನುಷ್ಯರಾಗಿ ಬದುಕಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ದೊರಕಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಬೇಕು. ಹಾಗಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ಅಸ್ಪೃಶ್ಯತೆ ನಾಶವಾಗಬೇಕು ಎಂದು ಅಂಬೇಡ್ಕರ್ ಶ್ರಮಿಸಿದ್ದರು ಎಂದು ತಿಳಿಸಿದರು.
ಮಹಾತ್ಮಾ ಗಾಂಧಿಯವರನ್ನು ಕೊಂದವರು, ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ ಮನುವಾದಿಗಳೇ ಇಂದು ಅವರನ್ನು ತಮ್ಮ ಸ್ವಂತ ಎನ್ನಲು ಪ್ರಾರಂಭಿಸಿದ್ದಾರೆ. ಸಂವಿಧಾನ ಜಾರಿಗೆ ಬಂದ ನಾಲ್ಕೈದು ದಿನಗಳಲ್ಲೇ ‘ದಿ ಆರ್ಗನೈಜರ್’ ಪತ್ರಿಕೆಯಲ್ಲಿ ವಿರೋಧ ಮಾಡಿ ಬರೆದಿದ್ದರು. ಈಗ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತ್ತು ಎಂದು ಮಾತನಾಡುತ್ತಾರೆ. ಅಂಬೇಡ್ಕರ್ ಅವರೇ ನನ್ನನ್ನು ಸೋಲಿಸಿದವರು ಸಾವರ್ಕರ್ ಮತ್ತು ಕಮ್ಯುನಿಸ್ಟ್ ನಾಯಕ ಎಸ್.ಎ ಡಾಂಗೆ ಎಂದು ಪತ್ರ ಬರೆದಿದ್ದರು. ಬಿಜೆಪಿ ಸ್ವಾರ್ಥಕ್ಕಾಗಿ ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನು ತಮ್ಮದೇ ಸ್ವಂತ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಅಂಬೇಡ್ಕರ್ ಅವರು ‘ನಾನು ಹಿಂದೂ ಆಗಿ ಹುಟ್ಟಿದೆ ಆದರೆ ಹಿಂದೂವಾಗಿ ಸಾಯಲಾರೆ’ ಎಂದು ಹೇಳಿದ್ದರು. ಹಿಂದೂ ಧರ್ಮ ತ್ಯಜಿಸಿ ಭೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಿಸಿ, ಅದು ಸಾಧ್ಯವಾಗುವುದಿಲ್ಲ ಎಂದು ಅರಿವಾದ ನಂತರ ಹಿಂದೂ ಧರ್ಮವನ್ನು ತ್ಯಜಿಸಿ, ಮಾನವೀಯತೆ ಮತ್ತು ಸಮಾನತೆ ಇದ್ದ ಭೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದರು.