ಕೆ.ಆರ್.ಪೇಟೆ: ದೇಶದ ಬಡವರು ಮತ್ತು ಶೋಷಿತ ವರ್ಗಗಳಿಗೆ ಅರಿವು ಮತ್ತು ಹಕ್ಕು ಕೊಟ್ಟ ಮಹಾನ್ ನಾಯಕ ಅಂಬೇಡ್ಕರ್. ಅವರ ಜೀವನದ ಹೋರಾಟದ ಗುಣಗಳನ್ನು ಎಲ್ಲರೂ ಬೆಳೆಸಿಕೊಂಡರೆ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಪಟ್ಟಣದ ಶತಮಾನದ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯಲ್ಲಿ ಇಲ್ಲದೇ ಇದ್ದಿದ್ದರೆ ದೇಶದ ದಲಿತರು, ಎಲ್ಲ ವರ್ಗದ ಬಡವರು, ಕಾರ್ಮಿಕರು, ಮಹಿಳೆಯರಿಗೆ ಹಕ್ಕುಗಳು ಸಿಗುತ್ತಿರಲಿಲ್ಲ. ಇಂತಹ ಅಪರೂಪದ ಮಾಣಿಕ್ಯ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡಿ ವಿಶ್ವವೇ ಮೆಚ್ಚುವಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಿಕೊಡುವ ಮೂಲಕ ದೇಶದ ಜನತೆಗೆ ಆಧಾರಸ್ತಂಭವಾಗಿದ್ದಾರೆ ಎಂದರು.
ಪಟ್ಟಣದ ಯಾವುದಾದರೊಂದು ಪ್ರಮುಖ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಾಮಾಜಿಕ ಚಿಂತಕ ಡಾ.ಎಚ್.ವಿ.ವಾಸು ಪ್ರಧಾನ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ದಲಿತರು, ಹಿಂದುಳಿದವರು, ಹಾಗೂ ಶೋಷಿತ ವರ್ಗಗಳಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಮಾಡಿದ ಕಾನೂನುಗಳು, ಹೋರಾಟಗಳು ಕಾರ್ಯಕ್ರಮಗಳ ಕುರಿತು ಮುಖ್ಯ ಭಾಷಣ ಮಾಡಿದರು.
ಬಿಇಒ ವೈ.ಎನ್.ತಿಮ್ಮೇಗೌಡ ಅಂಬೇಡ್ಕರ್ ಅವರ ಸಂವಿಧಾನ ವಿಧಿ ಬೋಧಿಸಿದರು. ಪುರಸಭಾ ಅಧ್ಯಕ್ಷೆ ಪಂಕಜಾ ಪ್ರಕಾಶ್, ಸದಸ್ಯ ಡಿ.ಪ್ರೇಮಕುಮಾರ್, ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ.ಇಒ ಸುಷ್ಮಾ, ಪುರಸಭಾ ಮುಖ್ಯಾಧಿಕಾರಿ ನಟರಾಜ್, ಜಿಪಂ ಮಾಜಿ ಸದಸ್ಯರಾದ ಡಾ.ಎಸ್.ಕೃಷ್ಣಮೂರ್ತಿ, ರಾಮದಾಸ್, ಬಸ್ತಿ ರಂಗಪ್ಪ, ಎನ್.ಜೆ.ರಮೇಶ್, ಸಿಪಿಐ ಸುಮಾರಾಣಿ, ಆನಂದೇಗೌಡ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಡಾ.ದಿವಾಕರ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.