ದಾವಣಗೆರೆ: ಇದು ಬೇಲಿಯೇ ಎದ್ದು ಹೊಲ ಮೇಯ್ದಂತಿರುವ ಪ್ರಕರಣ. ನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ನಲ್ಲಿಯೇ ನೌಕರನೊಬ್ಬ ಮೂರೂವರೆ ಕೆಜಿ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುವುದಲ್ಲದೆ, ನಕಲಿ ಆಭರಣಗಳನ್ನು ಅಡಮಾನವಿಟ್ಟು 1.52 ಕೋಟಿ ರೂ. ಸಾಲ ಮಂಜೂರು ಮಾಡಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಆರೋಪಿ, ನಗರದ ಸಿಎಸ್ಬಿ ಬ್ಯಾಂಕ್ನ ಗೋಲ್ಡ್ ಲೋನ್ ಅಧಿಕಾರಿ ಟಿ.ಪಿ. ಸಂಜಯ್ನನ್ನು ಇಲ್ಲಿನ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರ ಹಂಚಿಕೊಂಡರು. ಆರೋಪಿಯು ಬ್ಯಾಂಕ್ನ ಗ್ರಾಹಕರು ಅಡಮಾನ ಮಾಡಿದ 3 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ, 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ನಗರದ ಫೆಡರಲ್ ಬ್ಯಾಂಕ್, ಫೆಡ್ ಬ್ಯಾಂಕ್ ಮತ್ತು ಪಿ.ಬಿ. ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್ ಶಾಖೆಗಳಲ್ಲಿ ಅಡಮಾನ ಮಾಡಿ ಹಣ ಪಡೆದಿದ್ದ ಎಂದು ತಿಳಿಸಿದರು.
ಇದಲ್ಲದೆ, ಆತ ವಿವಿಧ ಗ್ರಾಹಕರ ಹೆಸರಿನಲ್ಲಿ 2 ಕೆಜಿ 744 ಗ್ರಾಂ ನಕಲಿ ಚಿನ್ನದ ಆಭರಣಗಳನ್ನು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ನಲ್ಲೇ ಅಡಮಾನವಿಟ್ಟು 1.52 ಕೋಟಿ ರೂ. ಸಾಲ ಪಡೆದು ವಂಚಿಸಿದ್ದ. ಕಳೆದ 6 ತಿಂಗಳಿಂದ ಹಂತ ಹಂತವಾಗಿ ಇಷ್ಟೆಲ್ಲ ಮೋಸ ನಡೆದರೂ ಬ್ಯಾಂಕ್ನವರ ಗಮನಕ್ಕೆ ಬಂದಿರಲಿಲ್ಲ. ಕಳೆದ ತಿಂಗಳು ಬ್ಯಾಂಕ್ನಲ್ಲಿ ಆಡಿಟ್ ಮಾಡುವಾಗ ಬಂಗಾರದ ಆಭರಣಗಳು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಬ್ಯಾಂಕಿನ ವ್ಯವಸ್ಥಾಪಕ ಕೆ.ಬಿ. ಶಿವಕುಮಾರ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳ್ಳತನವಾಗಿದ್ದ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವಿವರಿಸಿದರು. ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಜಿ. ಮಂಜುನಾಥ್, ಡಿವೈಎಸ್ಪಿಗಳಾದ ಬಿ. ಶರಣ ಬಸವೇಶ್ವರ, ಪದ್ಮಶ್ರೀ ಗುಂಜಿಕರ್, ಪೊಲೀಸ್ ಇನ್ಸ್ಪೆಕ್ಟರ್ ಎಚ್.ಎಸ್. ಸುನೀಲ್ ಕುಮಾರ್ ಇದ್ದರು.
ಮೋಜು, ಆನ್ಲೈನ್ ಗೇಮ್ಗೆ ಖರ್ಚು
ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆ ನಿವಾಸಿಯಾದ ಸಂಜಯ್ ಬಿಸಿಎ ಪದವೀಧರ. 6 ತಿಂಗಳ ಹಿಂದೆ ಸಿಎಸ್ಬಿ ಬ್ಯಾಂಕ್ಗೆ ಸೇರಿಕೊಂಡಿದ್ದ. ಇದಕ್ಕೂ ಮೊದಲು ಒಂದೆರಡು ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ. ಕಳ್ಳತನ ಮಾಡಿದ ಬಂಗಾರವನ್ನು ಅಡ ಇಟ್ಟಿದ್ದರಿಂದ ಬಂದ ಹಣದಲ್ಲಿ ಗೋವಾ ಇನ್ನಿತರ ಕಡೆ ತೆರಳಿ ಮೋಜು, ಮಸ್ತಿ ಮಾಡುತ್ತಿದ್ದ. ಜತೆಗೆ ಆನ್ಲೈನ್ ಗೇಮ್ ಗೀಳು ಅಂಟಿಸಿಕೊಂಡಿದ್ದ ಎಂದು ಎಸ್ಪಿ ಮಾಹಿತಿ ನೀಡಿದರು.
ನ್ಯಾಯಾಲಯದಿಂದ ಸರ್ಚ್ ವಾರಂಟ್
ಕದ್ದ ಬಂಗಾರದ ಆಭರಣಗಳನ್ನು ಆರೋಪಿ ಅಡವಿಟ್ಟಿದ್ದ ನಗರದ ಒಂದು ಹಣಕಾಸು ಸಂಸ್ಥೆಯವರು ಸಹಕಾರ ನೀಡದಿದ್ದಾಗ, ಪೊಲೀಸರು ನ್ಯಾಯಾಲಯ ದಿಂದ ಬ್ರೇಕ್ ಓಪನ್ ಸರ್ಚ್ ವಾರಂಟ್ ತಂದು, ಗ್ಯಾಸ್ ಕಟರ್ನಿಂದ ಸೇಫ್ ಚೆಸ್ಟ್ ಒಡೆದು, 1 ಕೆಜಿ 160 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಬೇಕಾಯಿತು. ಈ ರೀತಿ ನ್ಯಾಯಾಲಯದಿಂದ ಬ್ರೇಕ್ ಓಪನ್ ಸರ್ಚ್ ವಾರಂಟ್ ತಂದು ಕಾರ್ಯಾಚರಣೆ ನಡೆಸಿದ್ದು ರಾಜ್ಯದಲ್ಲೇ ಮೊದಲ ಪ್ರಕರಣ ಎನ್ನಲಾಗಿದೆ.