ನ್ಯೂಸ್

ಸಂಪಾದಕೀಯ: ಸಾರ್ಕ್​ಗೆ ಪರ್ಯಾಯ

ಬಾಬುಪ್ರಸಾದ್​ ಮೋಡಿಸ್​

ಜಮ್ಮು-ಕಾಶ್ಮೀರದ ಪಹಲ್ಗಾಮ್ಲ್ಲಿ ನಡೆದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತ ‘ಆಪರೇಷನ್ ಸಿಂಧೂರ’ದ ಮೂಲಕ ಪಾಕ್ ಮತ್ತು ಪಿಒಕೆಯಲ್ಲಿನ ಉಗ್ರನೆಲೆಗಳನ್ನು ನಾಶಗೊಳಿಸಿದ ಸಂದರ್ಭದಲ್ಲೂ ಅಮೆರಿಕ, ರಷ್ಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ಬಂದವು ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ತಮ್ಮ ಬದ್ಧತೆಯನ್ನು ತೋರಿದವು ಎಂಬುದು ಗಮನಾರ್ಹ.

ಆದರೆ, ಈ ಎಲ್ಲ ಬೆಳವಣಿಗೆಗಳು ಚೀನಾ ಮತ್ತು ಪಾಕಿಸ್ತಾನಕ್ಕೆ ಅಪಥ್ಯವಾಗಿ ಪರಿಣಮಿಸಿವೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಚೀನಾ ಭಾರತದೊಂದಿಗೆ ಹಳೆಯ ಬಾಂಧವ್ಯ ಹಾಗೂ ವ್ಯಾಪಾರ ಸಂಬಂಧವನ್ನು ಹೊಂದಿದೆಯಾದರೂ, ಪಾಕಿಸ್ತಾನವನ್ನು ಓಲೈಸಲು ಆಗಾಗ ಭಾರತದ ವಿರುದ್ಧ ರಾಜತಾಂತ್ರಿಕವಾಗಿ ಕತ್ತಿ ಮಸೆಯುತ್ತಲೇ ಇರುತ್ತದೆ ಎಂಬುದು ಕಹಿಸತ್ಯ.

ಇತ್ತೀಚಿನ ವರ್ಷಗಳಲ್ಲಿ ಚೀನಾ ಮತ್ತು ಪಾಕಿಸ್ತಾನದ ‘ಸ್ನೇಹ’ ಬಲಗೊಂಡಿದೆ. ಇದು ಯಾವ ಮಟ್ಟಿಗೆ ಹೋಗಿದೆ ಎಂದರೆ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಗಳನ್ನೂ ಚೀನಾ ಖಂಡಿಸುತ್ತಿಲ್ಲ. ತನ್ನ ದೇಶದ ಹಲವಾರು ಪ್ರಾಂತ್ಯಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ, ಅವರ ಹಕ್ಕುಗಳನ್ನು ಕಸಿದುಕೊಂಡಿರುವ ಚೀನಾ ಮತ್ತೊಂದೆಡೆ ಪಾಕ್​ನೊಂದಿಗೆ ಸ್ನೇಹ ಹೆಚ್ಚಿಸುತ್ತಲೇ ಸಾಗಿದೆ.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್​ಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿದಿದೆ. ಆದರೆ, ಚೀನಾದ ಹುನ್ನಾರ, ಕುತಂತ್ರಗಳನ್ನು ಪಾಕಿಸ್ತಾನ ಕೂಡ ಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಂಡಿಲ್ಲ. ಭಾರತದ ವಿರುದ್ಧದ ಕ್ರಮಗಳಿಗೆ ಯಾವುದೇ ರಾಷ್ಟ್ರದ ಬೆಂಬಲ ಸಿಗದಿದ್ದರೂ, ಚೀನಾ ತನ್ನನ್ನು ಸಮರ್ಥಿಸುತ್ತದೆ ಎಂಬ ಕಾರಣಕ್ಕೆ ಪಾಕಿಸ್ತಾನವು ಡ್ರಾ್ಯಗನ್ ರಾಷ್ಟ್ರದ ಅಣತಿಯಂತೆ ನಡೆದುಕೊಳ್ಳುತ್ತಿದೆ.

ಉತ್ತಮ ಉದ್ದೇಶಗಳಿಗಾಗಿ, ರಾಜತಾಂತ್ರಿಕ ಸಂಬಂಧಗಳಿಗಾಗಿ ಎರಡು ದೇಶಗಳ ನಡುವೆ ಬಾಂಧವ್ಯ ಹೆಚ್ಚುವುದು ಒಳ್ಳೆಯ ಬೆಳವಣಿಗೆಯೇ. ಆದರೆ, ಚೀನಾ ಮತ್ತು ಪಾಕಿಸ್ತಾನದ ಸ್ವಾರ್ಥದ ಮೈತ್ರಿ ಭಾರತಕ್ಕೆ ಮಾತ್ರವಲ್ಲ ಜಗತ್ತಿನ ಇತರ ರಾಷ್ಟ್ರಗಳಿಗೂ ಅಪಾಯಕಾರಿಯೇ. ಇದರ ಮತ್ತೊಂದು ಸೂಚನೆ ಈಗ ಸಿಗಲಾರಂಭಿಸಿದೆ. ಸದ್ಯ ನಿಷ್ಕ್ರಿಯವಾಗಿರುವ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ(ಸಾರ್ಕ್)ಕ್ಕೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಸಂಘಟನೆ ಸ್ಥಾಪಿಸಲು ಪಾಕಿಸ್ತಾನ ಹಾಗೂ ಚೀನಾ ಚಿಂತನೆ ನಡೆಸುತ್ತಿವೆ.

ಇದನ್ನು ಅಂತಾರಾಷ್ಟ್ರೀಯ ಸಮುದಾಯ, ಅದರಲ್ಲೂ ವಿಶೇಷವಾಗಿ ಭಾರತ, ಗಂಭೀರವಾಗಿ ಪರಿಗಣಿಸಬೇಕಿದೆ. ಈ ನೂತನ ಸಂಘಟನೆ ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳನ್ನು ಒಳಗೊಂಡ ಸಾರ್ಕ್​ಗೆ ಪರ್ಯಾಯ ಆಗಿರಲಿದೆ ಎನ್ನಲಾಗಿದೆ. ಹೊಸ ಪ್ರಾದೇಶಿಕ ಸಂಘಟನೆಯ ನೆಪದಲ್ಲಿ ಈ ರಾಷ್ಟ್ರಗಳು ತಮ್ಮ ಹಿತಾಸಕ್ತಿ ಪೂರೈಸುವುದಷ್ಟೇ ಅಲ್ಲ, ಭಾರತವಿರೋಧಿ ನಡೆಗಳಿಗೆ ಕುಮ್ಮಕ್ಕು ನೀಡುತ್ತವೆ ಎಂಬುದನ್ನು ಮರೆಯುವಂತಿಲ್ಲ. ಸಾರ್ಕ್​ಗೆ ಪರ್ಯಾಯವಾಗಿ ಮತ್ತೊಂದು ಸಂಘಟನೆ ತಲೆ ಎತ್ತಿದರೆ ಅದರಿಂದಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ಭಾರತ ಚಿಂತನೆ ನಡೆಸಿ, ಇಂಥ ಪ್ರಯತ್ನವನ್ನು ತಡೆಯಲು ಅಗತ್ಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕಿದೆ.