ಚಿಕ್ಕಮಗಳೂರಿನ ಅಂಬಳೆ ಕೈಗಾರಿಕೆ ಸಮೀಪದ ಏರ್ ಸ್ಟ್ರಿಪ್ ನಿರ್ಮಾಣದ ಜಾಗವನ್ನು ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಮಗ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ಪರಿಶೀಲಿಸಿದರು. ಸಿ.ಎನ್.ಮೀನಾ ಗರಾಜ್, ಸಿದ್ದರಾಜು, ರಾಜೇಶ್ ಇತರರಿದ್ದರು.  
ನ್ಯೂಸ್

ಏರ್ ಸ್ಟ್ರಿಪ್‌ಗೆ ಹೆಚ್ಚುವರಿ 19 ಎಕರೆ ಜಾಗ ಅಗತ್ಯ

ಚಿಕ್ಕಮಗಳೂರು: ನಗರ ಸಮೀಪದ ಕಿರು ವಿಮಾನ ನಿಲ್ದಾಣ (ಏರ್ ಸ್ಟ್ರಿಪ್) ನಿರ್ಮಿಸಲು ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ಶುಕ್ರವಾರ ಸ್ಥಳ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಸಿ.ಎನ್.ಮೀನಾ ಗರಾಜ್, ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಜು, ಉಪ ವಿಭಾಗಾಧಿಕಾರಿ ರಾಜೇಶ್ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಭೂ ಸ್ವಾಧೀನ ಕುರಿತು ಸಲಹೆ ನೀಡಿದರು.
ಏರ್ ಸ್ಟ್ರಿಪ್ ನಿರ್ಮಾಣಕ್ಕೆ ತಾಲೂಕಿನ ಅಂಬಳೆ ಕೈಗಾರಿಕಾ ಪ್ರದೇಶದ ಸಮೀಪ 120 ಎಕರೆ ಲಭ್ಯವಾಗಿದ್ದು, ಹೆಚ್ಚುವರಿಯಾಗಿ ಬೇಕಾಗಿರುವ 19 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಜಮೀನು ಹಸ್ತಾತರಿಸಿದರೆ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಅಧಿಕಾರಿಗಳು ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸ್ಥಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಎಂ.ಆರ್.ರವಿ ಮಾತನಾಡಿ, ಜಿಲ್ಲೆಯು ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆದುಕೊಂಡಿದೆ. ಇಲ್ಲಿನ ಸ್ಥಳಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿದ್ದರೆ ಇನ್ನೂ ಹೆಚ್ಚು ಜನ ಆಗಮಿಸುತ್ತಿದ್ದರು. ಆದರೂ ಪ್ರತಿ ವರ್ಷ ವಿದೇಶಿ ಹಾಗೂ ಹೊರ ರಾಜ್ಯದ ಪ್ರವಾಸಿಗರು ಹೆಚ್ಚಾಗುತ್ತಿರುವುದರಿಂದ ಅಭಿವೃದ್ಧಿಗೆ ನಿಲ್ದಾಣ ಅಗತ್ಯವಿದೆ ಎಂದರು.
ಜಿಲ್ಲೆಯಲ್ಲಿ ಏರ್ ಸ್ಟ್ರಿಪ್ ನಿರ್ಮಿಸುವುದಾಗಿ 2018ರಲ್ಲಿ ಘೋಷಣೆಯಾಗಿತ್ತು. 120 ಎಕರೆ ಜಾಗ ಗುರುತಿಸಲಾಗಿದ್ದು, ಹೆಚ್ಚುವರಿಯಾಗಿ 19 ಎಕರೆ ಬೇಕಾಗಿದೆ. ಸ್ವಾಧೀನಪಡಿಸಿಕೊಳ್ಳಲು 7 ಕೋಟಿ ರೂ. ಮಂಜೂರು ಮಾಡಲಾಗಿದೆ. ಇನ್ನೂ ಹೆಚ್ಚಿಗೆ ಹಣ ಬೇಕಾದರೆ ಇಲಾಖೆಯಿಂದ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಸದ್ಯಕ್ಕೆ 120 ಎಕರೆ ಏರ್ ಸ್ಟ್ರಿಪ್‌ಗಾಗಿ ಕಾಯ್ದಿರಿಸಿಲಾಗಿದೆ. 1200 ಮೀಟರ್ ರನ್‌ವೇಗೆ ಬೇಕಾಗಿರುವ ಹಿರೇಮಗಳೂರು ಗ್ರಾಮದ ಖಾಸಗಿ ಜಮೀನು 19 ಎಕರೆ ಸ್ವಾಧೀನ ಪಡಿಸಿಕೊಳ್ಳಬೇಕು. ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸುವ ಕಾರ್ಯ ಪ್ರಗತಿಯಲ್ಲಿದ್ದು ಸಾಮಾನ್ಯ ಭೂಸ್ವಾಧೀನ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಲೋಹಿತ್ ಇತರರಿದ್ದರು.

ರಾಜ್ಯದಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಲಿಪೋರ್ಟ್ ಮತ್ತು ಏರ್ ಸ್ಟ್ರೀಪ್ ಎರಡನ್ನೂ ನಿರ್ಮಿಸಲಾಗುತ್ತಿದೆ. ರಾಜ್ಯಾದ್ಯಂತ 3 ಹೆಲಿಪೋರ್ಟ್‌ಗಳು ಮಂಜೂರಾಗಿದ್ದು, ಚಿಕ್ಕಮಗಳೂರು, ಮಡಿಕೇರಿ, ಧರ್ಮಸ್ಥಳಕ್ಕೆ ಮಾತ್ರ. ಏರ್ ಸ್ಟ್ರೀಪ್‌ನಲ್ಲೇ 5 ಎಕರೆ ಜಾಗದಲ್ಲಿ ಹೆಲಿಪೋರ್ಟ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಎಂ.ಆರ್.ರವಿ ಹೇಳಿದರು. ಹೆಲಿಪೋರ್ಟ್ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿಯನ್ನು ಪವನ್ ಹನ್ಸ್ ಕಂಪನಿ ಮಾಡುತ್ತಿದ್ದು, ವರದಿ ತಯಾರಾದ ಕೂಡಲೇ ವಿಸ್ತೃತ ಯೋಜನಾ ವರದಿ ತಯಾರಿಸಲಿದೆ. ಈ ಸಂಬಂಧ ಸ್ಥಳದ ಮಣ್ಣು ಪರೀಕ್ಷೆ ಮುಗಿದಿದೆ. ಕೆಲಸದ ಗುಣಮಟ್ಟದ ದೃಷ್ಟಿಯಿಂದ ಮತ್ತೊಮ್ಮೆ ಪರೀಕ್ಷೆ ಮಾಡಿಸಲಾಗುವುದು ಎಂದು ತಿಳಿಸಿದರು.