ಸದೇಶ್ ಕಾರ್ಮಾಡ್ ಮೈಸೂರು
ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಗರನ್ನು ಸೆಳೆಯಲು ಯೋಜನೆಯೊಂದನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಸಿದ್ಧಪಡಿಸಿದೆ.
ಪ್ರತಿನಿತ್ಯ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಬಹುತೇಕ ಪ್ರವಾಸಿಗರು ಅಂಬಾವಿಲಾಸ ಅರಮನೆ, ಮೈಸೂರು ಮೃಗಾಲಯ, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಂತರ ಊಟಿ ಅಥವಾ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ಕಡೆಗೆ ಮುಖ ಮಾಡುತ್ತಾರೆ. ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ನಗರದಲ್ಲಿ ದಿನಪೂರ್ತಿ ಕಳೆದರೆ ನಗರದ ಆರ್ಥಿಕ ಚಟುವಟಿಕೆಯೂ ವೃದ್ಧಿಯಾಗುತ್ತದೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಮಯವನ್ನು ಮೈಸೂರಿನಲ್ಲಿ ಕಳೆಯಬೇಕು ಎಂಬ ಉದ್ದೇಶದಿಂದ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಸರ್ಕಾರಕ್ಕೆ ಪ್ರಸ್ತಾವನೆ: ಅಮ್ಯೂಸ್‌ಮೆಂಟ್ ಪಾರ್ಕ್ ಜತೆಗೆ ವಸ್ತು ಪ್ರದರ್ಶನ ಆವರಣದಲ್ಲಿರುವ 154 ಮಳಿಗೆಗಳನ್ನು ಪಾರಂಪರಿಕ ಶೈಲಿಯಲ್ಲಿ ನವೀಕರಣ ಮಾಡುವುದು ಹಾಗೂ ಜನಾಕರ್ಷಿಸುವ ಸಂಗೀತ ಕಾರಂಜಿ ನಿರ್ಮಾಣ ಮಾಡಲು ಸಹ ಉದ್ದೇಶಿಸಲಾಗಿದೆ. ಇದಕ್ಕೆ ಒಟ್ಟು 40 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್ ಯೋಜನೆಯ ಬಗ್ಗೆ ಮಾಹಿತಿ ನೀಡಿ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ನಗರದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಮತ್ತೊಂದು ತಾಣ ನಿರ್ಮಾಣವಾಗುತ್ತದೆ.
ನಗರದ ಅಂಬಾವಿಲಾಸ ಅರಮನೆ ಹಾಗೂ ಮೈಸೂರು ಮೃಗಾಲಯಕ್ಕೆ ಭೇಟಿ ನೀಡದೆ ಇದ್ದರೆ ಮೈಸೂರು ಪ್ರವಾಸ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ. ಈ ಎರಡು ಪ್ರವಾಸಿ ತಾಣಗಳ ಮಧ್ಯದಲ್ಲಿಯೇ ವಸ್ತು ಪ್ರದರ್ಶನ ಆವರಣ ಇದ್ದು, ಅಮ್ಯೂಸ್‌ಮೆಂಟ್ ಪಾರ್ಕ್, ಸಂಗೀತ ಕಾರಂಜಿ ನಿರ್ಮಾಣವಾದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಅವಕಾಶವಿದೆ. ಪ್ರಸ್ತುತ ದಸರಾ ಸಂದರ್ಭದಲ್ಲಿ ಮೂರು ತಿಂಗಳು ಮಾತ್ರ ವಸ್ತು ಪ್ರದರ್ಶನ ಆವರಣ ಚಟುವಟಿಕೆಯ ತಾಣವಾಗಿರುತ್ತದೆ. ಆ ನಂತರದ ದಿನಗಳಲ್ಲಿ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ. ವಸ್ತು ಪ್ರದರ್ಶನ ಆವರಣದಲ್ಲಿ ಸಾಕಷ್ಟು ಖಾಲಿ ಜಾಗವಿದ್ದು, ಆ ಜಾಗವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಪ್ರವಾಸಿಗರನ್ನು ಸೆಳೆಯುವ ಕಾರ್ಯ ಆಗಬೇಕಾಗಿದೆ.
ಸಂಗೀತ ಕಾರಂಜಿಯನ್ನು ವೀಕ್ಷಿಸುವ ಸಲುವಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮಂಡ್ಯದ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡುತ್ತಾರೆ. ಒಂದುವೇಳೆ ವಸ್ತು ಪ್ರದರ್ಶನ ಅವರಣದಲ್ಲಿ ಆಕರ್ಷಕ ಸಂಗೀತ ಕಾರಂಜಿ ನಿರ್ಮಾಣವಾದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದು ನಿಶ್ಚಿತ. ಸಂಗೀತ ಕಾರಂಜಿ ನಿರ್ಮಾಣವಾದರೆ ಸಂಜೆ ವೇಳೆ ಪ್ರವಾಸಿಗರು ಊಟಿ ಅಥವಾ ಕೊಡಗು ಜಿಲ್ಲೆಯತ್ತ ತೆರಳುವುದನ್ನು ತಡೆಯಬಹುದು.
ಹಳ್ಳ ಹಿಡಿಯದಿರಲಿ: ನಗರದ ಕೆಲವು ಪಾರ್ಕ್‌ಗಳಲ್ಲಿ ನಗರ ಪಾಲಿಕೆ ಹಾಗೂ ತೋಟಗಾರಿಕಾ ಇಲಾಖೆಯು ಕೆಲವು ವರ್ಷಗಳ ಹಿಂದೆ ಸಂಗೀತ ಕಾರಂಜಿ ನಿರ್ಮಾಣ ಮಾಡಿತ್ತು. ಆದರೆ, ನಿರ್ವಹಣೆಯ ಕೊರತೆಯಿಂದ ಯಾವುದೇ ಕಾರಂಜಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸಂಗೀತ ಕಾರಂಜಿಯನ್ನು ನಿರ್ವಹಣೆ ಮಾಡಲು ತಜ್ಞರು ಇಲ್ಲದ ಹಿನ್ನೆಲೆಯಲ್ಲಿ ಎಲ್ಲ ಸಂಗೀತ ಕಾರಂಜಿಗಳು ಬಂದ್ ಆಯಿತು. ವಸ್ತು ಪ್ರದರ್ಶನ ಆವರಣದಲ್ಲಿ ಸಂಗೀತ ಕಾರಂಜಿ ನಿರ್ಮಾಣವಾದರೆ ಅದರ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕು. ಇಲ್ಲವಾದಲ್ಲಿ ಆ ಯೋಜನೆಯೂ ಸಹ ಹಳ್ಳ ಹಿಡಿಯುತ್ತದೆ.
ವಸ್ತು ಪ್ರದರ್ಶನ ಆವರಣ ದಸರಾ ಸಂದರ್ಭದಲ್ಲಿ ಮಾತ್ರ ಚಟುವಟಿಕೆಯಿಂದ ಕೂಡಿರುತ್ತದೆ. ಉಳಿದ ದಿನಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಅಲ್ಲದೆ, ಬಹುತೇಕ ಪ್ರವಾಸಿಗರು ನಗರದಲ್ಲಿ ಒಂದು ದಿನವನ್ನು ಪೂರ್ತಿಯಾಗಿ ಕಳೆಯುತ್ತಿಲ್ಲ. ಈ ಕಾರಣಕ್ಕೆ ಅಮ್ಯೂಸ್‌ಮೆಂಟ್ ಪಾರ್ಕ್, ಸಂಗೀತ ಕಾರಂಜಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಯೋಜನೆ ಕುರಿತು ಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ದೊರೆಯುವ ನಿರೀಕ್ಷೆಯಲ್ಲಿ ಇದ್ದೇವೆ. ಒಂದುವೇಳೆ ಅನುದಾನ ದೊರೆಯದೆ ಇದ್ದರೆ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗುವುದು.
ಅಯೂಬ್ ಖಾನ್, ಅಧ್ಯಕ್ಷ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ