ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾ ಲಿಯೋನಾ ವಿರುದ್ಧ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದಾವಣಗೆರೆ, ರಾಮನಗರ, ಹಾವೇರಿ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೋಲಾರ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಿತು. ಕೊಪ್ಪ ತಾಲೂಕಿನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ವಿಜಯಪುರ ನಗರದ ಗಾಂಧಿ ವೃತ್ತದಲ್ಲಿ ದೇಶ ರಕ್ಷಕ ಪಡೆಯ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಅಮೂಲ್ಯಾನನ್ನು ಗಡಿ ಪಾರು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಅಮೂಲ್ಯಾಗೆ ಭಾಷಣಕ್ಕೆ ಅವಕಾಶ ಕೊಟ್ಟವರ ಕುರಿತು ತನಿಖೆ ನಡೆಸಿ ಅವರಿಗೂ ಗಡಿ ಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ಅವರನ್ನು ಗಡಿಪಾರು ಮಾಡಬೇಕು ಹಾಗೂ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಯಾದಗಿರಿ ಜಿಲ್ಲೆಯ ಶಹಾಪುರನಲ್ಲಿ ಎಬಿವಿಪಿ, ಬಿಜೆಪಿ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಹಾಪುರದ ಬಸವೇಶ್ವರ ವೃತ್ತದಲ್ಲಿ ಟೈರ್ಗೆ ಬೆಂಕಿ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ದೇಶದ್ರೋಹಿ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮೈಗೊಳ್ಳಬೇಕೆಂದು ಪ್ರತಿಭಟನೆ ನಿರತರು ಆಗ್ರಹಿಸಿದರು.
ಕಲಬುರಗಿಯ ಎಸ್ವಿಪಿ ವೃತ್ತದಲ್ಲಿ ಕಲಬುರಗಿ ನಾಗರಿಕ ದೇಶಭಕ್ತ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಅಮೂಲ್ಯಾ ಭಾವಚಿತ್ರಕ್ಕೆ ಬೆಂಕಿ ಹಾಕಿ ಧಿಕ್ಕಾರ ಕೂಗಿದರು.